ಶಾಂತಿ ಕದಡುವ ಸಂದೇಶ ಹಾಕಿದ ಆರೋಪ: ಪ್ರಕರಣ ದಾಖಲು

ಮಂಗಳೂರು: ಉಳ್ಳಾಲ ಶಾರದೋತ್ಸವ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಶಾಂತಿ ಕದಡುವ ಸಂದೇಶ ಹಾಕಿದ ಆರೋಪದಲ್ಲಿ ಫೇಸ್‌ಬುಕ್ ಖಾತೆದಾರರ ವಿರುದ್ಧ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ವಿವರ: ಅ.6ರಂದು ಸಂಜೆ 6ಕ್ಕೆ ನ್ಯೂಸ್ ವೆಬ್‌ಸೈಟ್‌ವೊಂದರ ಫೇಸ್‌ಬುಕ್ ಪೇಜ್‌ನಲ್ಲಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಶಾರದೋತ್ಸವ ಗಲಾಟೆಯ ಬಗ್ಗೆ ಸುದ್ದಿ ಲಿಂಕ್ ಪ್ರಕಟವಾಗಿತ್ತು. ಆ ಸುದ್ದಿಯಲ್ಲಿ ಗುಂಪು ಸೇರಿದ್ದ ವಿಡಿಯೊಯೋವನ್ನು ಪೋಸ್ಟ್ ಮಾಡಲಾಗಿತ್ತು. ಈ ವಿಡಿಯೋಗೆ ಶೈಲೇಶ್ ಕಾಶಿಪಟ್ನ ಎಂಬಾತ ಸಂದೇಶವೊಂದನ್ನು ಹಾಕಿದ್ದು, ಅದಕ್ಕೆ ಪ್ರತಿಯಾಗಿ ಆಯಿಷಾ ಮುಹಮ್ಮದ್ ಎಂಬ ಫೇಸ್‌ಬುಕ್ ಖಾತೆಯ ಬಳಕೆದಾರ ಪ್ರಚೋದನಾಕಾರಿ ಸಂದೇಶ ಹಾಕಿ ಸಾಮಾಜಿಕ ಶಾಂತಿ ಕದಡುವ ಕೃತ್ಯವೆಸಗಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನಲೆಯಲ್ಲಿ ಫೇಸ್‌ಬುಕ್ ಖಾತೆದಾರರ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಮಿಷನರ್ ಪ್ರತಿಕ್ರಿಯೆ:
ಉಳ್ಳಾಲ ಘಟನೆಗೆ ಸಂಬಂಸಿ ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಪ್ರತಿಕ್ರಿಯಿಸಿ, ಶಾರದಾ ಮಹೋತ್ಸವವನ್ನು ಬೆಳಗ್ಗೆ 1ಗಂಟೆಗೆ ಮೆರವಣಿಗೆ ಪೂರ್ಣಗೊಳಿಸಲು ಒಪ್ಪಿಕೊಂಡಿದ್ದರು. ಆದರೆ ನಿಗದಿತ ಸಮಯಕ್ಕೆ ಮೆರವಣಿಗೆ ಪೂರ್ಣಗೊಳಿಸದ ಕಾರಣ ನಮ್ಮ ಅಕಾರಿಗಳು ಸಂಗೀತ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಆದರೆ ಕೆಲವು ಸಂಘಟಕರು ಸ್ಪಂದಿಸದ ಹಿನ್ನಲೆಯಲ್ಲಿ ಪಿಎಸ್‌ಐ ಮೈಕ್ ತಡೆಯಲು ಪ್ರಯತ್ನಿಸಿದರು. ಈ ಸಂದರ್ಭ ಪೊಲೀಸ್ ಸಿಬ್ಬಂದಿ ವಿರುದ್ಧ ಅವಾಚ್ಯವಾಗಿ ನಿಂದಿಸಿದರು. ಈ ಸಂದರ್ಭ ಮಾತಿಗೆ ಮಾತು ಬೆಳೆದು 3 ಜನರನ್ನು ಪೊಲೀಸ್ ವಶಕ್ಕೆ ಪಡೆಯಲಾಗಿತ್ತು. ಈ ಸಂದರ್ಭ ಶಾರದ ಮೂರ್ತಿಯನ್ನು ರಸ್ತೆಯಲ್ಲಿ ಕೆಲವರು ಬಿಟ್ಟು ಆಕ್ಷೇಪ ವ್ಯಕ್ತಪಡಿಸಿದರು.
ಡಿಸಿಪಿ ಸ್ಥಳಕ್ಕೆ ಭೇಟಿ ನೀಡಿ, ‘ಬಂಧಿತರಲ್ಲಿ ಇಬ್ಬರ ಪಾತ್ರ ಅಪರಾಧದಲ್ಲಿ ಸೀಮಿತವಾಗಿರುವುದರಿಂದ ಮೆರವಣಿಗೆಗೆ ಅವಕಾಶ ನೀಡುವ ನಿರ್ಧಾರ ತೆಗೆದುಕೊಂಡರು. ಮೆರವಣಿಗೆ ಶಾಂತಿಯುತವಾಗಿ ಮುಕ್ತಾಯವಾಯಿತು ಎಂದು ವಿವರಿಸಿದರು.







