ದ.ಕ. ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ದೃಷ್ಟಿದೋಷ ಪ್ರಕರಣ!

ಸಾಂದರ್ಭಿಕ ಚಿತ್ರ
ಮಂಗಳೂರು: ದ.ಕ. ಜಿಲ್ಲೆಯ ಶಾಲಾ ಮಕ್ಕಳಲ್ಲಿ ದೃಷ್ಟಿದೋಷ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಆಘಾತಕಾರಿ ಅಂಶ ವರದಿಯಾಗಿದೆೆ. ಜಿಲ್ಲೆಯ ಸುಮಾರು ಆರು ಸಾವಿರ ಮಕ್ಕಳಲ್ಲಿ ದೃಷ್ಟಿ ಸಮಸ್ಯೆ ಕಂಡು ಬಂದಿದ್ದು, ಅಂದಾಜು ಐದು ಸಾವಿರ ಮಕ್ಕಳಿಗೆ ಕನ್ನಡಕದ ಅನಿವಾರ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮಕ್ಕಳಲ್ಲಿ ಅತಿಯಾದ ಮೊಬೈಲ್ ಫೋನ್ ಬಳಕೆಯೇ ಇದಕ್ಕೆ ಕಾರಣ ಎಂದು ಆರೋಗ್ಯ ಇಲಾಖೆ ಅಭಿಪ್ರಾಯಪಟ್ಟಿದೆ.
ಅಂದಾಜು 6ರಿಂದ 16 ವರ್ಷ ವಯಸ್ಸಿನ ಮಕ್ಕಳಲ್ಲಿ ದೃಷ್ಟಿ ದೋಷ ಪ್ರಕರಣ ಹೆಚ್ಚಾಗಿದೆ. ಕೆಲವು ಮಕ್ಕಳಲ್ಲಿ ಸಾಮಾನ್ಯ ದೃಷ್ಟಿದೋಷವಿದ್ದರೆ, ಇನ್ನು ಕೆಲವು ಮಕ್ಕಳಲ್ಲಿ ಚಿಕಿತ್ಸೆ ಅನಿವಾರ್ಯ ಎಂಬಷ್ಟರ ಮಟ್ಟಿಗೆ ದೃಷ್ಟಿದೋಷ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೊಬೈಲ್ ಫೋನ್ಗಳನ್ನು ಮಿತವಾಗಿ ಬಳಸುವಂತೆ ಪೋಷಕರು ಆಗಾಗ ಮಕ್ಕಳಿಗೆ ಸೂಚನೆ ನೀಡುತ್ತಿದ್ದರೂ ಅದನ್ನು ನಿರ್ಲಕ್ಷಿಸಿದ ಪರಿಣಾಮ ಕಣ್ಣಿನ ಸಮಸ್ಯೆ ಹೆಚ್ಚಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.
ಜಿಲ್ಲೆಯಲ್ಲಿ ಮಕ್ಕಳ ಮೊಬೈಲ್ ಫೋನ್ ಚಟವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ‘ಮನೋಸ್ಥೈರ್ಯ’ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಶಿಕ್ಷಣ ಇಲಾಖೆ ಕೂಡ ಇದಕ್ಕೆ ಸಂಬಂಧಿಸಿ ಅಧಿಕಾರಿಗಳನ್ನು ನೇಮಕ ಮಾಡಿದೆ. ಅಲ್ಲದೆ ಕಾರ್ಯಾಗಾರವನ್ನೂ ಏರ್ಪಡಿಸಿದೆ. ಆದರೂ ಮಕ್ಕಳಲ್ಲಿ ಮೊಬೈಲ್ ವ್ಯಾಮೋಹ ನಿಯಂತ್ರಣಕ್ಕೆ ಬಂದಿಲ್ಲ ಎನ್ನಲಾಗಿದೆ.
ಮೊಬೈಲ್ ಫೋನ್ ವೀಕ್ಷಣೆಯಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಮಾತ್ರವಲ್ಲ, ನಿದ್ರಾಹೀನತೆ, ಮಾನಸಿಕ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತಿದೆ. ಅನೇಕ ಹೆತ್ತವರು ತಮ್ಮ ಮಕ್ಕಳನ್ನು ಮೊಬೈಲ್ ಫೋನ್ ಚಟ ಬಿಡಿಸುವ ವಿಚಾರದಲ್ಲಿ ಕೌನ್ಸೆಲಿಂಗ್ ಮಾಡಿಸುತ್ತಿದ್ದಾರೆ ಎಂದು ಮಂಗಳೂರಿನ ಮನೋಶಾಸ್ತ್ರಜ್ಞ ಡಾ. ಕಿರಣ್ ಕುಮಾರ್ ತಿಳಿಸಿದ್ದಾರೆ.
ಮಕ್ಕಳು ಅತಿಯಾಗಿ ಮೊಬೈಲ್ ಫೋನ್ ಬಳಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳನ್ನು ಮಾಡಿದರೂ ಅದ್ಯಾವುದೂ ಫಲಪ್ರದವಾಗಿಲ್ಲ. ಒಮ್ಮೆ ಮೊಬೈಲ್ ಗೀಳಿಗೆ ಒಳಗಾದರೆ ಅದರಿಂದ ಹೊರಬರುವ ಸಾಧ್ಯತೆ ತೀರಾ ಕಡಿಮೆ ಎಂಬಂತಂಹ ಸ್ಥಿತಿ ಎದುರಾಗಿದೆ. ಆದ್ದರಿಂದ ಮಕ್ಕಳಿಗೆ ಮೊಬೈಲ್ ಫೋನ್ ಕೊಡುವ ವಿಚಾರವಾಗಿ ಅತೀವ ಮುಂಜಾಗ್ರತೆ ವಹಿಸುವ ಅಗತ್ಯವಿದೆ.
-ಡಾ.ಸುದರ್ಶನ್, ಅಧಿಕಾರಿ, ಮನೋಸ್ಥೈರ್ಯ ಕಾರ್ಯಕ್ರಮ
ಶಾಲೆಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮನೆಯಲ್ಲೂ ಮಕ್ಕಳು ಮೊಬೈಲ್ಗಳನ್ನು ಮಿತವಾಗಿ ಬಳಸಿದಷ್ಟು ಅನುಕೂಲವಿದೆ. ಶಾಲೆಯಲ್ಲಿ ಮೊಬೈಲ್ ಬಳಕೆ ಮಾಡದಂತೆ ನಿರಂತರವಾಗಿ ಜಾಗೃತಿ ವಹಿಸಲಾಗುತ್ತಿದೆ. ಮಾಹಿತಿ ನೀಡಲಾಗುತ್ತಿದೆ.
-ಗೋವಿಂದ ಮಡಿವಾಳ, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ದ.ಕ.ಜಿಲ್ಲೆ







