Mulki | ಹಣಕ್ಕೆ ಬೇಡಿಕೆಯಿಟ್ಟು ಕೃಷಿಕನ ಮೇಲೆ ದಾಳಿ: ಆರೋಪಿಗಳ ಮೇಲೆ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲು

ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ
ಮುಲ್ಕಿ: ಇಲ್ಲಿನ ಅಂಗಾರಗುಡ್ಡೆಯ ಕೃಷಿಕರೊಬ್ಬರ ಮೇಲೆ ಹಣ ಸುಲಿಗೆ ಮಾಡುವ ಸಲುವಾಗಿ ದಾಳಿ ಮಾಡಿದ್ದ ಪ್ರಕರಣದ ಮೂವರು ಆರೋಪಿಗಳ ವಿರುದ್ಧ ಮುಲ್ಕಿ ಪೊಲೀಸರು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಲ್ಕಿ ಕೆರೆಕಾಡು ನಿವಾಸಿ ಶ್ಯಾಮ್ ಸುಂದರ್ ಶೆಟ್ಟಿ, ಆಕಾಶ್ ಪೂಜಾರಿ ಹಾಗೂ ಸುವೀನ್ ಎಂಬವರ ಮೇಲೆ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಸುವೀನ್ ಮೇಲೆ 1 ಕೊಲೆ ಪ್ರಕರಣ, 2 ಕೊಲೆಯತ್ನಗಳು, 1 ಡಕಾಯಿತಿ ಮತ್ತು ಗಾಂಜಾ ಸಂಬಂಧ ಒಂದು ಪ್ರಕರಣಗಳು ದಾಖಲಾಗಿತ್ತು. ಮತ್ತೋರ್ವ ಆರೋಪಿ ಆಕಾಶ್ ವಿರುದ್ಧ ಕೊಲೆಯತ್ನ, ಜಾತಿ ನಿಂದನೆ, ಸರಕಾರಿ ಅಧಿಕಾರಿಗೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣಗಳು ದಾಖಲಾಗಿತ್ತು. ಇವರ ಮೇಲಿನ ಹಲವು ಪ್ರಕರಣ ಬಾಕಿ ಇದ್ದವು.
ಆರೋಪಿಗಳ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿರುವ ಕಾರಣ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳ ಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಜ.1ರಂದು ಆರೋಪಿಗಳು ಕಂಬಳದ ಕೋಣಗಳ ಮಾಲಕರಾಗಿರುವ ಅಂಗಾರ
ಗುಡ್ಡೆಯ ಶಂಸು ಸಾಹೇಬ್ ಎಂಬರ ಕೋಣಗಳನ್ನು ಕಟ್ಟಲಾಗಿದ್ದ ನೆರೆಮನೆಯ ಮೇಲೆ ದಾಳಿ ಮಾಡಿ 50 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಅವರು ಹಣ ನೀಡಲು ನಿರಾಕರಿಸಿದಾಗ ಶಂಸು ಸಾಹೇಬ್ ಮತ್ತು ಮಗನ ಮೇಲೆ ದಾಳಿ ಮಾಡಿದ್ದರು.
ಈ ಸಂಬಂಧ ಶಂಸು ಸಾಹೇಬ್ ಅವರ ಮಗ ಸಹಾಬುದ್ದೀನ್ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಸಂಬಂಧ ತೀವ್ರ ತನಿಖೆ ಕೈಗೊಂಡ ಪೊಲೀಸರು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.







