ಸೂಪರ್ ಬಜಾರ್‌ಗೆ ನುಗ್ಗಿ ನಗದು ಕಳವು

ಮಂಗಳೂರು, ಆ.22: ನಗರದ ಕೊಡಿಯಾಲಬೈಲಿನ ಎಂಪಾಯರ್ ಮಾಲ್‌ನಲ್ಲಿರುವ ದಿನಸಿ ಸಹಿತ ವಿವಿಧ ಸಾಮಗ್ರಿಗಳ ಮಾರಾಟದ ಸೂಪರ್ ಬಜಾರ್ ಮಳಿಗೆಯಿಂದ 3.05 ಲಕ್ಷ ರೂ. ನಗದು ಕಳವು ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಆ.20ರಂದು ರಾತ್ರಿ 9:15ಕ್ಕೆ ವ್ಯವಹಾರ ಮುಗಿಸಿ ತಾನು ಬೀಗ ಹಾಕಿ ತೆರಳಿದ್ದೆ. ಆ. 21ರಂದು ಬೆಳಗ್ಗೆ 7:45ಕ್ಕೆ ಬಾಗಿಲು ತೆರದು ಒಳಗೆ ಹೋದಾಗ ಟೇಬಲ್ ಎದುರಿನಲ್ಲಿ ಅಳವಡಿಸಿದ್ದ ಶೋಕೇಸ್‌ನ ಬಾಗಿಲುಗಳು ತೆರೆದಿರುವುದು ಕಂಡು ಬಂದಿದೆ. ಪರಿಶೀಲಿಸಿದಾಗ ಒಳಗೆ ಇದ್ದ ಸೇಫ್ ಲಾಕರ್ ಇರಲಿಲ್ಲ. ಹುಡುಕಾಡಿದಾಗ ಮಾಲ್‌ನ ದಕ್ಷಿಣ ಭಾಗದಲ್ಲಿ ಶೋಕೇಸ್‌ನಲ್ಲಿದ್ದ ವಸ್ತುಗಳು ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ. ಮಳಿಗೆಯ ಕ್ಯಾಶ್ ಕೌಂಟರ್‌ನ ಡ್ರಾವರ್ ಕೂಡಾ ತೆರದುಕೊಂಡಿತ್ತು. ಈ ಸಂಬಂಧ ಮಳಿಗೆಯ ಸಿಸಿ ಕೆಮರಾ ದೃಶ್ಯಾವಳಿ ಗಳನ್ನು ಪರಿಶೀಲಿಸಿದಾಗ ನಸುಕಿನ ಜಾವ 2 ಗಂಟೆಗೆ ಮೂವರು ಮಾಲ್‌ನ ಪರಿಸರದಲ್ಲಿ ಸುತ್ತಾಡಿ, ಮಳಿಗೆಯ ದಕ್ಷಿಣ ಭಾಗದಲ್ಲಿ ಗೋಡೆಯ ಬದಿಯಲ್ಲಿ ಇಟ್ಟಿದ್ದ ಪ್ಲಾಸ್ಟಿಕ್ ಬಾಕ್ಸ್‌ಗಳ ಮೂಲಕ ಮೇಲಕ್ಕೆ ಹತ್ತಿ ಮೇಲ್ಭಾಗದಲ್ಲಿದ್ದ ಗಾಜನ್ನು ತೆಗೆದು ಅದರ ಮೂಲಕ ಒಳಗೆ ಪ್ರವೇಶಿಸಿದ್ದಾರೆ.
ಬಳಿಕ ಕ್ಯಾಶ್ ಕೌಂಟರ್‌ನಲ್ಲಿದ್ದ 5 ಸಾವಿರ ರೂ. ನಗದು ಮತ್ತು 3 ಲಕ್ಷ ರೂ. ನಗದು ಇರಿಸಿದ್ದ ಸೇಫ್ ಲಾಕರನ್ನು ತೆಗೆದುಕೊಂಡು 3:55ರ ವೇಳೆಗೆ ಒಳಗೆ ಬಂದ ದಾರಿಯಿಂದಲೇ ಹೊರಗೆ ಹೋಗಿರುವುದು ಕಂಡು ಬಂದಿದೆ ಎಂದು ಮಳಿಗೆಯ ಸಿಬ್ಬಂದಿ ಬರ್ಕೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.





