ಚೆಂಡಾಡಿ ಮೆಡಿಕಲ್ಸ್ ಹಾಗೂ ಸ್ಪಂದನ ಕ್ಲಿನಿಕ್ ವತಿಯಿಂದ ಶಾಲೆಗಳಿಗೆ ಉಚಿತ ಪ್ರಥಮ ಚಿಕಿತ್ಸೆ ಕಿಟ್ ವಿತರಣೆ

ಬಂಟ್ವಾಳ: ಚೆಂಡಾಡಿ ಮೆಡಿಕಲ್ಸ್ ಹಾಗೂ ಸ್ಪಂದನ ಕ್ಲಿನಿಕ್ ಬೋಳಂತೂರು ವತಿಯಿಂದ ಸರಕಾರಿ ಮತ್ತು ಖಾಸಗಿ ಶಾಲೆಗಳಿಗೆ ಪ್ರಥಮ ಚಿಕಿತ್ಸೆ ಕಿಟ್ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿವಿಧ ಸರಕಾರಿ ಮತ್ತು ಖಾಸಗಿ ಶಾಲೆಗಳಿಗೆ ಈ ವೇಳೆ ಪ್ರಥಮ ಚಿಕಿತ್ಸಾ ಕಿಟ್ ಅನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
"ವಿದ್ಯಾರ್ಥಿಗಳಲ್ಲಿ ಸಮುದಾಯದ ಆರೋಗ್ಯದ ಕುರಿತು ಮತ್ತು ವೈಯಕ್ತಿಕ ಆರೋಗ್ಯದ ಕುರಿತು ಕಾಳಜಿಯನ್ನು ಹೆಚ್ಚಿಸುವುದು ಮತ್ತು ವಿದ್ಯಾರ್ಥಿಗಳ ಸುರಕ್ಷತೆಯನ್ನು ಮನಗಂಡು ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡು ಶಾಲೆಗಳಿಗೆ ಉಚಿತ ಪ್ರಥಮ ಚಿಕಿತ್ಸಾ ಕಿಟ್ ಅನ್ನು ನೀಡುತ್ತಿದ್ದೇವೆ" ಎಂದು ಚೆಂಡಾಡಿ ಮೆಡಿಕಲ್ಸ್ ಹಾಗೂ ಸ್ಪಂದನ ಕ್ಲಿನಿಕ್ ನ ವ್ಯವಸ್ಥಾಪಕ ಇಮ್ರಾನ್ ಪಾಣೆಮಂಗಳೂರು ತಿಳಿಸಿದರು.
ಈ ವೇಳೆ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರವನ್ನು ನಡೆಸಿದ್ದು, ಮಂಗಳೂರಿನ HRSನ ತಜ್ಞ ತರಬೇತುದಾರರಾದ ಮುನೀರ್ ರವರು ತರಬೇತಿ ನೀಡಿದರು. ಆರೋಗ್ಯ ತುರ್ತು ಪರಿಸ್ಥಿತಿಗಳ ನಿರ್ವಹಣೆ, ಗಾಯಗಳ ಆರೈಕೆ, ಮುರಿತಗಳ ನಿರ್ವಹಣೆ, ಕಾರ್ಡಿಯೋ ಪಲ್ಮನರಿ ನಿರ್ವಹಣೆ ಮತ್ತು ಗೋಲ್ಡನ್ ಹೌರ್ ಪರಿಕಲ್ಪನೆಗಳ ಕುರಿತು ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಈ ಕಾರ್ಯಕ್ರಮದಡಿಯಲ್ಲಿ, ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಬೋಳಂತೂರು, ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ನಾರ್ಶ ಮೈದಾನ, ಸರ್ಕಾರಿ ಪ್ರೌಢಶಾಲೆ ನಾರ್ಶ ಮೈದಾನ, ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಸುರಿಬೈಲ್ ಹಾಗೂ ಸುರಿಬೈಲಿನ ದಾರುಲ್ ಅಶ್-ಅರಿಯ್ಯ ಆಂಗ್ಲ ಮಾಧ್ಯಮ ಶಾಲೆಗೆ ಪ್ರಥಮ ಚಿಕಿತ್ಸಾ ಕಿಟ್ ಅನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಚೆಂಡಾಡಿ ಮೆಡಿಕಲ್ಸ್ ಹಾಗೂ ಸ್ಪಂದನ ಕ್ಲಿನಿಕ್ ನ ವ್ಯವಸ್ಥಾಪಕ ಇಮ್ರಾನ್ ಪಾಣೆಮಂಗಳೂರು, ಮುಹಮ್ಮದ್ ಆಶಿಕ್ ಉಕ್ಕುಡ, ಅಫ್ಸಾನ್ ಮತ್ತು ಫೈರೋಝ್ ಉಪಸ್ಥಿತರಿದ್ದರು.







