ನಿಧಾನಗತಿಯ ಕಾಮಗಾರಿಗೆ ಸಂಸದ ನಳಿನ್‌ರಿಂದ ಅಧಿಕಾರಿಗಳಿಗೆ ಕ್ಲಾಸ್
ಮನಪಾ ವ್ಯಾಪ್ತಿಯ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ

ಮಂಗಳೂರು, ಅ. 14: ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳು ಅಲ್ಲಲ್ಲಿ ನಿಧಾನಗತಿ ಯಲ್ಲಿ ಸಾಗುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕ್ಲಾಸ್ ತೆಗೆದುಕೊಂಡ ಘಟನೆ ಶನಿವಾರ ನಡೆಯಿತು.
ನಗರದ ವಿವಿಧ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂಸದ ನಳಿನ್ ಕುಮಾರ್ ಕಟೀಲು, ಕೆಲವು ಕಾಮಗಾರಿಗಳು ವಿಳಂಬವಾಗುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆಯನ್ನೂ ನೀಡಿದರು.
ಪಂಪ್‌ವೆಲ್ ಬೈಪಾಸ್ ರಸ್ತೆ ವೀಕ್ಷಣೆಯ ಸಂದರ್ಭ ಅಸಮರ್ಪಕ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸ ದರು, ಅಲ್ಲಿನ ಸಮಸ್ಯೆಯನ್ನು ಶೀಘ್ರ ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಜೆಪ್ಪು ರಸ್ತೆ ಕಾಮಗಾರಿ, ಎಮ್ಮೆಕೆರೆಯ ಅಂತಾರಾಷ್ಟ್ರೀಯ ಮಟ್ಟದ ಸ್ವಿಮ್ಮಿಂಗ್ ಫೂಲ್, ವೆನ್ಲಾಕ್ ನೂತನ ಕಟ್ಟಡ ಕಾಮಗಾರಿಗಳ ವೀಕ್ಷಣೆ ಮಾಡಿದರು.
ಶಾಸಕ ಡಿ.ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪಮೇಯರ್ ಸುನೀತಾ, ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಮತ್ತಿತರರು ಸಂಸದರ ನಗರ ಸಂಚಾರ-ಕಾಮಗಾರಿ ಪರಿಶೀಲನಾ ಕಾರ್ಯಕ್ಕೆ ಸಾಥ್ ನೀಡಿದರು.
745 ಕೋಟಿ ರೂ. ಮೊತ್ತದ ಕಾಮಗಾರಿ ಪೂರ್ಣ
ಸ್ಮಾರ್ಟ್ ಸಿಟಿ ಯೋಜನೆಯಿಂದ ಮಂಗಳೂರಿನ ಚಿತ್ರಣವೇ ಬದಲಾಗಿ ನವ ಮಂಗಳೂರು ನಿರ್ಮಾಣವಾಗುತ್ತಿದೆ. ವಿವಿಧ ಯೋಜನೆಗಳಿಗಾಗಿ 1 ಸಾವಿರ ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದುವರೆಗೆ 745 ಕೋಟಿಯಷ್ಟು ಮೊತ್ತದ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಕಾಮಾರಿಗಳ ಪರಿಶೀಲನೆ ಬಳಿಕ ಸುದ್ದಿಗಾರರ ಜತೆ ಮಾತನಾಡುತ್ತಾ ಈ ಪ್ರತಿಕ್ರಿಯೆ ನೀಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ಮಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆ ಬರುವಂತಾಯಿತು. 55 ಕಾಮಗಾರಿ ಪೂರ್ಣಗೊಂಡಿದ್ದು, 33 ಪ್ರಗತಿಯಲ್ಲಿದೆ. 4 ಕಾಮಗಾರಿಗಳು ಪಿಪಿಪಿ ಮಾದರಿಯಲ್ಲಿ ನಡೆಯುತ್ತಿವೆ ಎಂದರು.
ನಗರದ ಪುರಭವನದ ಬಳಿಯ ಅಂಡರ್ ಪಾಸ್, ಕದ್ರಿ ಪಾರ್ಕ್, ಕ್ಲಾಕ್ ಟವರ್ ಹೀಗೆ ಹಲವು ಅಭಿವೃದ್ಧಿ ಕಾಮಗಾರಿಗಳು ನಗರದ ಸೌಂದರ್ಯ ಹೆಚ್ಚಿಸಿವೆ. ಜೆಪ್ಪುವಿನಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ರಸ್ತೆ ಮತ್ತು ರೈಲ್ವೆ ಟ್ರ್ಯಾಕ್ ಸಮಸ್ಯೆ ಬಗೆಹರಿದಿದೆ. ಜೆಪ್ಪುವಿನಲ್ಲಿ ರಸ್ತೆ ಡಬ್ಲಿಂಗ್ ಕಾಮಗಾರಿ ಅಂತಿಮ ಹಂತದಲ್ಲಿದೆ. ಇದಕ್ಕಾಗಿ ಹಲವು ಮಂದಿ ದಾನಿಗಳು ತಮ್ಮ ಜಾಗಬಿಟ್ಟುಕೊಟ್ಟಿದ್ದಾರೆ ಎಂದವರು ಹೇಳಿದರು.
ಅಳಪೆ-ಪಡೀಲ್ ರಸ್ತೆ, ಜಪ್ಪು ಕುಡುಪಾಡಿ, ಮಹಾಕಳಿ ಪಡ್ಪು, ಬೈಕಂಪಾಡಿ ಹೀಗೆ ಹಲವು ಕಡೆ ನಾಲ್ಕು ಕಡೆ ರೈಲ್ವೆ ಬ್ರಿಡ್ಜ್ ಸಮಸ್ಯೆಗಳಿದ್ದವು. ಇದೀಗ ಬಗೆಹರಿದಿದೆ. ಇದಕ್ಕಾಗಿ ಸ್ಮಾರ್ಟ್‌ಸಿಟಿಯಿಂದ 30 ಕೋಟಿ ಮತ್ತು ರಾಜ್ಯ ಸರಕಾರ 19.5 ಕೋಟಿ ಹಣ ಒದಗಿಸಿತ್ತು. ಇನ್ನುಳಿದ ಕಾಮಗಾರಿಗಳು ಇನ್ನಷ್ಟು ವೇಗದಲ್ಲಿ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾ ಗಿದೆ. ಪ್ರತಿವಾರ ಸಭೆಗಳನ್ನು ನಡೆಸುವ ಮೂಲಕ ಕಾಮಗಾರಿಗಳಿಗೆಗೆ ವೇಗ ನೀಡಲಾಗುವುದು ಎಂದು ನಳಿನ್ ಕುಮಾರ್ ಹೇಳಿದರು.
ಕೆಪಿಟಿ ಮತ್ತು ನಂತೂರು ಮೇಲ್ಸೇತುವೆಗೆ ಸಂಬಂದಿಸಿ ಟೆಂಡರ್ ಆಗಿ 6 ತಿಂಗಳಾಗಿದೆ. ರಸ್ತೆಅಗಲೀಕರಣ ಆಗಬೇಕಿದ್ದು, ಇದಕ್ಕೂ ಮೊದಲು ಸರ್ವಿಸ್ ರಸ್ತೆಗಳಾಗಬೇಕು. ಆದರೆ ಅಲ್ಲಿರುವ ಮರಗಳನ್ನು ತೆರವುಗೊಳಿಸುವಲ್ಲಿ ಸಮಸ್ಯೆಗಳು ಉದ್ಭವಿಸಿದ ಕಾರಣ ವಿಳಂಬವಾಗಿತ್ತು. ಇದೀಗ ಸಮಸ್ಯೆ ಬಗೆಹರಿದಿದೆ ಎಂದರು.







