ಕರಾವಳಿ ಉತ್ಸವ| ಚಲನಚಿತ್ರೋತ್ಸವಕ್ಕೆ ಚಾಲನೆ

ಮಂಗಳೂರು, ಜ. 19: ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಮೂರು ದಿನಗಳ ನಡೆಯುವ ಕರಾವಳಿ ಉತ್ಸವ ಚಲನಚಿತ್ರೋತ್ಸವಕ್ಕೆ ಭಾರತ್ ಸಿನಿಮಾಸ್‌ನಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ಚಲನಚಿತ್ರ ನಿರ್ಮಾಪಕ, ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೊ ಉದ್ಘಾಟನೆ ನೆರವೇರಿಸಿ, ತುಳುನಾಡಿನ ಭಾಷಾ ಸಿನಿಮಾಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಚಲನಚಿತ್ರೋತ್ಸವ ಏರ್ಪಡಿಸಿರುವುದು ಒಳ್ಳೆಯ ಬೆಳವಣಿಗೆ. ಪ್ರಾದೇಶಿಕ ಸಿನಿಮಾಗಳಿಗೆ ಒಳ್ಳೆಯ ಭವಿಷ್ಯವಿದ್ದು, ನಾನಿದ್ದಾಗ ಸಬ್ಸಿಡಿಯನ್ನೂ ಕೊಡಿಸಿದ್ದೆ. 2-3 ವರ್ಷಗಳಿಂದ ಸಬ್ಸಿಡಿ ಸ್ಥಗಿತಗೊಂಡಿದ್ದುö, ಎಲ್ಲ ಪ್ರಾದೇಶಿಕ ಚಲನಚಿತ್ರದವರು ದನಿ ಎತ್ತಬೇಕು ಎಂದರು.
ನಿರ್ದೇಶಕ ರಾಜ್ ಬಿ.ಶೆಟ್ಟಿ ಮಾತನಾಡಿ, ಸಿನಿಮಾ ನೋಡುವವರ ಸಂಖ್ಯೆ ಹೆಚ್ಚುವುದರಿಂದ ಹೊಸ ಕಥೆಗಳೂ ಹುಟ್ಟುತ್ತವೆ, ಯಕ್ಷಗಾನ, ಹುಲಿವೇಷ ಸಹಿತ ಕುಣಿತ ಪ್ರಕಾರಗಳಿರುವ ಕರಾವಳಿಯಿಂದ ಹೊಸ ಕಥಾ ಪ್ರಕಾರಗಳು ಹೊರಹೊಮ್ಮುತ್ತಿವೆ. ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಸಿನಿಮಾಗಳ ಪಾತ್ರವೂ ಇದೆ. ಇಲ್ಲೇ ಶಾಶ್ವತ ಸಿನಿಮಾ ಸೆಟ್ ನಿರ್ಮಿಸಿದರೆ ಹೆಚ್ಚಿನ ಹೂಡಿಕೆ ಬರಲಿದೆ. ಉದ್ಯೋಗ ಸೃಷ್ಟಿಯಾಗಲಿದೆ ಎಂದರು.
ನಿರ್ಮಾಪಕರಾದ ಎಚ್.ಶ್ರೀನಿವಾಸ, ಧನರಾಜ್ ಆರ್., ಪ್ರಕಾಶ್ ಪಾಂಡೇಶ್ವರ, ಸಚಿನ್ ಎಸ್., ಬಿಗ್ ಸಿನಿಮಾಸ್‌ನ ಬಾಲಕೃಷ್ಣ ಶೆಟ್ಟಿ, ಚಲನಚಿತ್ರೋತ್ಸವ ಸಂಘಟಕ ಯತೀಶ್ ಬೈಕಂಪಾಡಿ, ಜಿಲ್ಲಾ ನಗರ ಕೋಶದ ಯೋಜನಾಕಾರಿ ಡಾ.ಜಿ.ಸಂತೋಷ್ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ ಉಪಸ್ಥಿತರಿದ್ದರು. ಅನುರಾಗ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.







