ವಿಬಿ-ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್‌ನಿಂದ ಅಪಪ್ರಚಾರ: ವಿಶ್ವೇಶ್ವರ ಕಾಗೇರಿ ಆರೋಪ

ಮಂಗಳೂರು, ಜ.10: ಮಹಾತ್ಮಾ ಗಾಂಧೀ ನರೇಗಾ ಯೋಜನೆಯ ಹೆಸರನ್ನು ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್ ಗಾರ್ ಮತ್ತು ಆಜೀವಿಕಾ ಮಿಷನ್-ಗ್ರಾಮೀಣ(ವಿಬಿ-ಜಿ ರಾಮ್ ಜಿ) ಯೋಜನೆಯಾಗಿ ಬದಲಾಯಿಸಿದ್ದು ಮಾತ್ರವಲ್ಲ ಅದರಲ್ಲಿ ಹಲವು ಪ್ರಯೋಜನಗಳನ್ನೂ ಸೇರಿಸಲಾಗಿದೆ. ಈ ಬಗ್ಗೆ ಕಾಂಗ್ರೆಸ್ ವಿನಾಕಾರಣ ಅಪಪ್ರಚಾರ ಮಾಡುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಅಪಪ್ರಚಾರ ಬಯಲು ಮಾಡಲು ಜ.15ರಿಂದ ಫೆ.25ರ ವರೆಗೆ ಬಿಜೆಪಿಯಿಂದ ರಾಜ್ಯವ್ಯಾಪಿ ಅಭಿಯಾನ ಕೈಗೊಳ್ಳಲಾಗುವುದು ಎಂದರು.
ಕಾಲ ಕಾಲಕ್ಕೆ ಯೋಜನೆಗಳ ಹೆಸರು ಬದಲಾಗುತ್ತದೆ. ಹಿಂದೆ ನೆಹರೂ ರೋಜ್‌ಗಾರ್ ಯೋಜನಾ ಎಂದಿದ್ದ ಹೆಸರನ್ನು ಕಾಂಗ್ರೆಸ್‌ನವರೇ ಅವರ ಸರಕಾರವಿದ್ದಾಗ ನರೇಗಾ ಎಂದು ಬದಲಾಯಿಸಿದ್ದರು. 2016ರಲ್ಲಿ ಮನರೇಗಾ ಆಗಿ ಬದಲಾಯಿತು. ಈಗ 20 ವರ್ಷಗಳ ಬಳಿಕ ಅದರಲ್ಲಿ ಬದಲಾವಣೆ ತರಲಾಗಿದೆ ಎಂದರು.
ಉದ್ಯೋಗದ ಖಾತರಿಯೀಗ 100ರಿಂದ 125 ದಿನಗಳಿಗೆ ಆಗಿದೆ. ಕೂಲಿ ಪಾವತಿ ಒಂದೇ ವಾರದಲ್ಲಿ ಆಗಲಿದೆ. ಹಲವು ರೀತಿಯ ಆಡಳಿತಾತ್ಮಕ ಸುಧಾರಣೆ ಮಾಡಲಾಗಿದೆ ಎಂದ ಅವರು ಗ್ರಾಮ ಪಂಚಾಯತಿಯೇ ಕೆಲಸದ ಆಯ್ಕೆ ಮಾಡಲಿದೆ ಹೊರತು ಇದು ಕೇಂದ್ರೀಕೃತವಲ್ಲ. ಕಾಂಗ್ರೆಸ್ ನಾಯಕರು ಕೇವಲ ಅಪಪ್ರಚಾರ ನಡೆಸುತ್ತಿದ್ದಾರೆ ಎಂದರು.
ಜಲಸಂರಕ್ಷಣೆಗಾಗಿ ಚೆಕ್ ಡ್ಯಾಂ ನಿರ್ಮಾಣ, ಕೆರೆ, ಬಾವಿ ನಿರ್ಮಾಣ, ಸ್ವಹಾಯ ಸಂಘ, ಫಾರ್ಮರ್ಸ್ ಪ್ರೊಡ್ಯೂಸರ್ಸ್ ಕಂಪನಿಗೆ ಒತ್ತು ಪ್ರಕೃತಿ ವಿಕೋಪಗಳಿಗೆ ತಡೆ ಆದ್ಯತೆಯಾಗಿದೆ, 2016ರಲ್ಲಿ ಉದ್ಯೋಗ ಖಾತರಿಗೆ 33000 ಕೋ.ರೂ. ಇದ್ದ ಬಜೆಟ್ ಈಗ 86 ಸಾವಿರ ಕೋಟಿಗೆ ಏರಿಕೆ ಯಾಗಿದೆ. ರಾಜ್ಯಗಳ ಭಾಗಿದಾರಿಕೆ ಹೆಚ್ಚಾಗಬೇಕು ಎನ್ನುವ ದೃಷ್ಟಿಯಿಂದ ಅವರ ಪಾಲನ್ನು ಶೇ.40ಕ್ಕೆ ಏರಿಕೆ ಮಾಡಲಾಗಿದೆ ಎಂದರು.
ಕೇಂದ್ರದ ಯೋಜನೆಗಳಿಗೆ ರಾಜ್ಯದ ಹಣ ಬಳಸಿಕೊಂಡು ಪ್ರಧಾನಿಯ ಫೊಟೊ ಹಾಕುತ್ತಾರೆ ಎಂಬ ಕಾಂಗ್ರೆಸ್ ಆರೋಪಗಳಿಗೆ ಉತ್ತರಿಸಿದ ಅವರು, ಕೇಂದ್ರದ ಯೋಜನೆಗಳ ಪ್ರಯೋಜನವನ್ನು ಫಲಾನುಭವಿಗಳಿಗೆ ಸಿಗದಂತೆ ಮಾಡುವುದು ಕಾಂಗ್ರೆಸ್‌ನವರ ಹುನ್ನಾರ, ಆಯುಷ್ಮಾನ್ ಭಾರತ, ವಯೋವಂದನೆ ಯೋಜನೆಗಳಲ್ಲೂ ಅದನ್ನೇ ಮಾಡಿದ್ದಾರೆ, ಕೇಂದ್ರದ ಮೇಲೆ ಗೂಬೆ ಕೂರಿಸುವುದೇ ಅವರ ಜಾಯಮಾನವಾಗಿದೆ ಎಂದರು.
ಸಂಸದ ಬ್ರಿಜೇಶ್ ಚೌಟ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಶಾಸಕ ವೇದವ್ಯಾಸ ಕಾಮತ್, ಪರಿಷತ್ ಸದಸ್ಯ ಕಿಶೋರ್ ಕುಮಾರ್, ಮಾಜಿ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ವಸಂತ ಪೂಜಾರಿ ಉಪಸ್ಥಿತರಿದ್ದರು.
ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಬಗ್ಗೆ ಮಾಡಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ತಾನು ಈಗಲೂ ಬದ್ಧನಿದ್ದೇನೆ. ಆ ಬಗ್ಗೆ ನ್ಯಾಯಾಧೀಶರಿಂದ ತನಿಖೆಗೆ ಸರಕಾರ ಆದೇಶಿಸಲಿ. ಆ ಬಳಿಕ ಅಗತ್ಯವಿದ್ದರೆ ನಾನೇ ದಾಖಲೆ ಪತ್ರ ಒದಗಿಸುವುದಕ್ಕೆ ಸಿದ್ಧನಿದ್ದೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತರಿಸಿದರು.







