ಸಕಾರಾತ್ಮಕ ಬದಲಾವಣೆಯೊಂದಿಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿ: ಪ್ರೊ.ಶಾಂತಿಶ್ರೀ ಧುಲಿಪುಡಿ ಪಂಡಿತ್

ಮಂಗಳೂರು, ನ.15: ದೊರೆತ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ನಮ್ಮ ಸುತ್ತಮುತ್ತಲಿನ ಜನ ಸಮುದಾಯದಲ್ಲಿ ಸಕಾರಾತ್ಮಕ ಬದಲಾವಣೆಯೊಂದಿಗೆ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತವರಾಗಿ ಎಂದು ಹೊಸದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶಾಂತಿಶ್ರೀ ಧುಲಿಪುಡಿ ಪಂಡಿತ್ ಯುವ ಪದವೀಧರರಿಗೆ ಕರೆ ನೀಡಿದ್ದಾರೆ.
ಅವರು ಶನಿವಾರ ದೇರಳಕಟ್ಟೆಯ ಯೆನೆಪೊಯ ಪರಿಗಣಿತ ವಿಶ್ವವಿದ್ಯಾನಿಲಯದ ಆವರಣದ ಯೆಂಡುರೆನ್ಸ್ ಝೋನ್ ಸಭಾಂಗಣದಲ್ಲಿ ನಡೆದ ಯೆನೆಪೊಯ ವಿವಿಯ 15ನೇ ಘಟಿಕೋತ್ಸವ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದರು.
ನಿಮ್ಮ ಮುಂದೆ ಅಪಾರ ಅವಕಾಶಗಳಿವೆ. ಈ ಸಂದರ್ಭದಲ್ಲಿ ಸ್ವಂತ ಬೆಳವಣಿಗೆಯನ್ನು ಮಾತ್ರವಲ್ಲದೆ ನಿಮ್ಮ ಸಮುದಾಯಗಳ ಅಭಿವೃದ್ಧಿಗೆ, ಇಡೀ ರಾಷ್ಟ್ರವನ್ನು ಬಲಪಡಿಸಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದೆ. ಭಾರತ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಹಾದಿಯಲ್ಲಿ ಸಾಗುತ್ತಿರುವಾಗ 2020ರ ಹೊಸ ಶಿಕ್ಷಣ ನೀತಿಯ ಮೂಲಕ ಬದಲಾವಣೆಗೊಂಡ ನೀತಿಯ ಮೊದಲ ತಂಡದ ಪದವಿಧರರಾದ ನೀವು ದೇಶದ ಆರ್ಥಿಕ, ಸಾಂಸ್ಕೃತಿಕ ಜಾಗತಿಕ ನೆಲೆಯಲ್ಲಿ ಉನ್ನತ ಕನಸುಗಳೊಂದಿಗೆ ನನಸು ಮಾಡಲು ಸಾಗಬೇಕಾಗಿದೆ ಎಂದು ಹೇಳಿದರು.
ಭಾರತದ ಶಕ್ತಿಯನ್ನು ಕೇವಲ ಆರ್ಥಿಕ ಬೆಳವಣಿಗೆಯಿಂದ ಮಾತ್ರ ನಿರ್ಧರಿಸಲು ಸಾಧ್ಯವಿಲ್ಲ. ದೇಶದ ಭಾಷೆ ವೈವಿಧ್ಯಮಯ ಸಂಸ್ಕೃತಿ ಸಂಪ್ರದಾಯಗಳಿಂದ ಕೂಡಿದ ಸಾಮಾಜಿಕ ಸ್ತರಗಳಲ್ಲಿ ದೇಶದ ಶಕ್ತಿ ವಿಸ್ತರಿಸಿದೆ.ಈ ವೈವಿಧ್ಯವನ್ನು ಸ್ವೀಕರಿಸಿ, ನಿಮ್ಮ ಭವಿಷ್ಯವನ್ನು ನೀವೆ ರೂಪಿಸಿ. ನಮ್ಮ ಸುತ್ತ ಮುತ್ತಲಿನ ಜಗತ್ತಿನ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣ ರಾಗಿರಿ.ಸವಾಲುಗಳನ್ನು ಎದುರಿಸಿ ಮುನ್ನಡೆಯಿರಿ ಎಂದು ಕರೆ ನೀಡಿದರು.
ನಿಮ್ಮ ಜೀವನದ ಅಂತಿಮ ಕೊಡುಗೆ ಯಶಸ್ಸು, ಭೌತಿಕ ಪ್ರತಿಫಲಗಳು, ಬಿರುದು ಗಳಿಂದ ಸಾರ್ವಜನಿಕ ಸನ್ಮಾನ ಗಳಿದ ಅಲ್ಲ.ಆ ರೀತಿಯ ಯಶಸ್ಸು ಬಾಹ್ಯ, ಕ್ಷಣಿಕ ಮತ್ತು ರಾತ್ರೋರಾತ್ರಿ ಕಣ್ಮರೆಯಾಗಬಹುದು. ಉಳಿಯುವುದು ವ್ಯವಸ್ಥೆಯಲ್ಲಿ ನೀವು ಇತರರ ಬದುಕಿನಲ್ಲಿ ಮಾಡುವ ಸಕಾರಾತ್ಮಕ ಸುಧಾರಣೆ,ಬದಲಾವಣೆ ಮಹತ್ವದ್ದಾಗಿದೆ ಎಂದರು.
ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಾಧಿಪತಿ ಡಾ.ಯೆನೆಪೊಯ ಅಬ್ದುಲ್ಲಾ ಕುಂಞಿ ವಿವಿಧ ವಿಭಾಗಗಳ ಪದವೀಧರರಿಗೆ ಪದವಿ ಪ್ರಧಾನ ಮಾಡಿದರು.
ಸೆಂಟರ್ ಫಾರ್ ಸೆಲ್ಯುಲಾರ್ ಆಂಡ್ ಮಾಲಿಕ್ಯುಲರ್ ಪ್ಲಾಟ್ಫಾರ್ಮ್ಸ್ (ಸಿ ಸಿಎಎಂಪಿ), ಬೆಂಗಳೂರು ಇದರ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ತಸ್ಲಿಮರಿಫ್ ಸಯ್ಯದ್ ಗೌರವ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಉಪಕುಲಪತಿ ಡಾ. ಎಂ. ವಿಜಯಕುಮಾರ್ ಸ್ವಾಗತಿಸಿ, ವಿಶ್ವವಿದ್ಯಾನಿಲಯದ ವರದಿ ವಾಚಿಸಿದರು.
ಸಮಾರಂಭದಲ್ಲಿ ದಂತ, ವೈದ್ಯಕೀಯ, ನರ್ಸಿಂಗ್, ಫಿಸಿಯೋಥೆರಪಿ, ಫಾರ್ಮಸಿ, ಅಲೈಡ್ ಹೆಲ್ತ್ ಸೈನ್ಸಸ್, ಆಯುರ್ವೇದ, ಹೋಮಿಯೋಪತಿ, ವಿಜ್ಞಾನ, ಕಲೆ ಮತ್ತು ಸಮಾಜ ವಿಜ್ಞಾನ, ವಾಣಿಜ್ಯ ಮತ್ತು ಮ್ಯಾನೇಜೆಂಟ್ ಮುಂತಾದ ವಿವಿಧ ವಿಭಾಗಗಳ ಚಿನ್ನದ ಪದಕ ವಿಜೇತರು, ಡಾಕ್ಟರೇಟ್ ಪದವೀಧರರು ಸೇರಿದಂತೆ ಒಟ್ಟು 3,729 ಪದವೀಧರರಿಗೆ ಪದವಿ ಪ್ರಧಾನ ಮಾಡಲಾಯಿತು.
ವಿವಿ ಸಹ ಕುಲಾಧಿಪತಿ ಮುಹಮ್ಮದ್ ಫರ್ಹಾದ್ ಯೆನೆಪೊಯ, ಪರೀಕ್ಷಾಂಗ ನಿಯಂತ್ರಕ ಡಾ.ಬಿ.ಟಿ. ನಂದೀಶ್, ಸಹ ಕುಲಪತಿ ಡಾ.ಬಿ.ಎಚ್. ಶ್ರೀಪತಿ ರಾವ್, ಕುಲಸಚಿವ ಡಾ. ಗಂಗಾಧರ ಸೋಮಯಾಜಿ ಕೆ.ಎಸ್. ಮತ್ತಿತರರು ಉಪಸ್ಥಿತರಿದ್ದರು.







