ಧರ್ಮಸ್ಥಳ ಪ್ರಕರಣ: ಜಯಂತ್ ಕೈಸೇರಿದ ಎಸ್‌ಐಟಿ ವರದಿಯ ಪ್ರತಿ

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದಲ್ಲಿ ಶುಕ್ರವಾರ ಮಹತ್ವದ ಬೆಳವಣಿಗೆಗಳು ನಡೆದಿದ್ದು, ಎಸ್‌ಐಟಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯ ಪ್ರತಿ ಸೌಜನ್ಯಾ ಪರ ಹೋರಾಟಗಾರ ಜಯಂತ್ ಟಿ. ಕೈ ಸೇರಿದೆ.
ಎಸ್‌ಐಟಿ 3,923 ಪುಟಗಳ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು ಅದರಲ್ಲಿ 1,100 ಪುಟಗಳ ಪ್ರತಿಯನ್ನು ನ್ಯಾಯಾಲಯವು ಜಯಂತ್‌ರಿಗೆ ನೀಡಿರುವುದಾಗಿ ತಿಳಿದುಬಂದಿದೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ನ.20ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ಈ ವರದಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಆರು ಮಂದಿಯ ವಿರುದ್ಧ ಕ್ರಮ ಕೈಗೊಳ್ಳಲು ಎಸ್‌ಐಟಿ ಅವಕಾಶ ಕೋರಿತ್ತು. ಅಲ್ಲದೇ ಈ ವರದಿಯನ್ನು ಬಹಿರಂಗಗೊಳಿಸದಂತೆ ನ್ಯಾಯಾಲಯವನ್ನು ಕೋರಿತ್ತು.
ಎಸ್‌ಐಟಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಈ ವರದಿಯ ಪ್ರತಿ ಪಡೆಯಲು ಜಯಂತ್ ಟಿ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಎಸ್‌ಐಟಿ ಕೋರಿಕೆಯ ಹಿನ್ನೆಲೆಯಲ್ಲಿ ನ್ಯಾಯಾಲಯ ಅದನ್ನು ನೀಡಲು ನಿರಾಕರಿಸಿತ್ತು.
ಬಳಿಕ ಬೆಂಗಳೂರಿನ ಹಿರಿಯ ನ್ಯಾಯವಾದಿ ದೊರೆ ರಾಜು ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ ಜಯಂತ್ ಪರವಾಗಿ ವಾದ ಮಂಡಿಸಿದ್ದರು. ಅಂತಿಮವಾಗಿ ನ್ಯಾಯಾಲಯವು ಎಸ್‌ಐಟಿ ವರದಿಯ ಪ್ರತಿ ನೀಡಲು ಸಮ್ಮತಿ ಸೂಚಿಸಿತ್ತು.
ಅದರಂತೆ ನ್ಯಾಯಾಲಯವು ಜಯಂತ್‌ರಿಗೆ ಎಸ್‌ಐಟಿ ವರದಿಯ ಕೆಲ ಭಾಗಗಳನ್ನು ಶುಕ್ರವಾರ ನೀಡಿದೆ.
ಲಭ್ಯ ಮಾಹಿತಿಯಂತೆ ನ್ಯಾಯಾಲಯ ನೀಡಿರುವುದು ಜಯಂತ್ ಹಾಗೂ ಇತರರ ಹೇಳಿಕೆಗಳೇ ಆಗಿವೆ. ಚಿನ್ನಯ್ಯ ನ್ಯಾಯಾಲಯದ ಮುಂದೆ ನೀಡಿರುವ ಹೇಳಿಕೆ ಹಾಗೂ ಎಸ್‌ಐಟಿ ವರದಿಯಲ್ಲಿರುವ ಇತರ ಮಹತ್ವದ ವಿಚಾರಗಳನ್ನು ನ್ಯಾಯಾಲಯ ನೀಡಿಲ್ಲ ಎಂದು ತಿಳಿದುಬಂದಿದೆ.







