ನಶೆ ಮುಕ್ತ ಮಂಗಳೂರು ಅಭಿಯಾನದ ಅಂಗವಾಗಿ ಕಾರ್ನರ್ ಮೀಟ್

ಮಂಗಳೂರು, ಡಿ.15: ಮೇಕ್ ಎ ಚೇಂಜ್ ಫೌಂಡೇಶನ್ ಹಾಗೂ ಮಂಗಳೂರು ನಗರ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ನಶೆ ಮುಕ್ತ ಮಂಗಳೂರು ಅಭಿಯಾನದ ಅಂಗವಾಗಿ ಕಾರ್ನರ್ ಮೀಟ್ ಕಾರ್ಯಕ್ರಮವು ನಗರದ ಸಂತ ಆಗ್ನೇಸ್ ಕಾಲೇಜಿನಲ್ಲಿ ನಡೆಯಿತು.
ಮೇಕ್ ಎ ಚೇಂಜ್ ಫೌಂಡೇಶನ್ ಸಂಸ್ಥಾಪಕ ಸುಹೈಲ್ ಕಂದಕ್ ಮಾತನಾಡಿ, ಮಂಗಳೂರು ನಗರವು ಸಮೃದ್ಧ ಇತಿಹಾಸ ಹಾಗೂ ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿದೆ. ಆದರೆ ಇತ್ತೀಚಿನ ಕೆಲ ದುರ್ಘಟನೆಗಳಿಂದ ಮಂಗಳೂರಿನ ಹೆಸರು ಋಣಾತ್ಮಕ ವಿಚಾರಗಳೊಂದಿಗೆ ಹೆಚ್ಚು ಕೇಳಿಬರುತ್ತಿರುವುದು ನೋವಿನ ಸಂಗತಿ. ಇದನ್ನು ಬದಲಾಯಿಸಲು ವಿದ್ಯಾರ್ಥಿಗಳು ನಶೆ ಮುಕ್ತ ಮಂಗಳೂರು ಅಭಿಯಾನಕ್ಕೆ ಕೈಜೋಡಿಸಬೇಕು. ಹಿಂದಿನಂತೆ ಮಂಗಳೂರು ಮತ್ತೊಮ್ಮೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ದೇಶದ ಗಮನ ಸೆಳೆಯುವಂತೆ ಮಾಡಬೇಕು ಎಂದರು.
ಕದ್ರಿ ಪೊಲೀಸ್ ಠಾಣೆಯ ಎಸ್ಸೈ ಮನೋಹರ್ ಡ್ರಗ್ಸ್ ಮುಕ್ತ ಮಂಗಳೂರು ನಿರ್ಮಾಣಕ್ಕೆ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸಹಕಾರ ಅಗತ್ಯವಿದೆ. ಮಾದಕ ವಸ್ತುಗಳಿಗೆ ಬಲಿಯಾಗಿರುವ ವಿದ್ಯಾರ್ಥಿಗಳ ಕುರಿತು ಮಾಹಿತಿ ನೀಡಿದರೆ, ಅವರನ್ನು ಈ ವ್ಯಸನದಿಂದ ರಕ್ಷಿಸುವ ಹೊಣೆ ಪೊಲೀಸ್ ಇಲಾಖೆಯದ್ದಾಗಿದೆ. ಇದಕ್ಕಾಗಿ ಉಚಿತ ಕೌನ್ಸಿಲಿಂಗ್ ವ್ಯವಸ್ಥೆಯನ್ನೂ ಇಲಾಖೆ ಒದಗಿಸುತ್ತದೆ. ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸುವುದು ಇಲಾಖೆಯ ಉದ್ದೇಶವಲ್ಲ, ಅವರನ್ನು ಮಾದಕ ವ್ಯಸನದಿಂದ ಹೊರತರುವುದೇ ನಮ್ಮ ಮುಖ್ಯ ಗುರಿಯಾಗಿದೆ ಎಂದರು.
ಬಾರ್ನ್ ಅಗೈನ್ ಫೌಂಡೇಶನ್ ಮುಖ್ಯಸ್ಥೆ ಬೀನಾ ಮಾದಕ ವಸ್ತುಗಳ ವ್ಯಸನಕ್ಕೆ ಬಲಿಯಾದ ತಮ್ಮ ಅನುಭವ ಹಾಗೂ ಅದರಿಂದ ಹೊರಬರಲು ಎದುರಿಸಿದ ಸಂಕಷ್ಟಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರಲ್ಲದೆ ಮಾದಕ ವ್ಯಸನವು ಒಬ್ಬ ವ್ಯಕ್ತಿಯನ್ನಷ್ಟೇ ಅಲ್ಲ, ಸಂಪೂರ್ಣ ಕುಟುಂಬ ಮತ್ತು ಸಮಾಜ ವ್ಯವಸ್ಥೆಯನ್ನೇ ಹಾಳುಮಾಡುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಕಾರ್ಪೊರೇಟರ್ ನವೀನ್ ಡಿಸೋಜ, ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ. ಸಿಸ್ಟರ್ ಎಂ. ವೆನಿಸಾ ಎ.ಸಿ., ಗುರುಪ್ರಸಾದ್, ಲಾವಣ್ಯ ಬಲ್ಲಾಳ್ ಉಪಸ್ಥಿತರಿದ್ದರು.







