ಬ್ಯೂಟಿಪಾರ್ಲರ್ ಹೆಸರಿನಲ್ಲಿ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿ: ವಿಮೆನ್ ಇಂಡಿಯಾ ಮೂವ್ಮೆಂಟ್

ಮಂಗಳೂರು: ಬ್ಯೂಟಿಪಾರ್ಲರ್ ಹೆಸರಲ್ಲಿ ತನ್ನ ಪಾರ್ಲರ್ ನ ಒಬ್ಬಳು ಮಹಿಳಾ ಸಿಬ್ಬಂದಿಗೆ ತನ್ನ ಇತರ ಸಿಬ್ಬಂದಿಗಳ ಮೂಲಕ ಹಲ್ಲೆ ನಡೆಸಿ ಅರೆಬೆತ್ತಲೆಗೊಳಿಸಿ ಅಶ್ಲೀಲ ಪೋಟೋಗಳನ್ನು ತೆಗೆಸಿ ಬ್ಲ್ಯಾಕ್ ಮೇಲ್ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಇದೀಗ ಸಂತ್ರಸ್ತೆಯು ಇದರ ವಿರುದ್ಧ ಮಂಗಳೂರಿನ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಅವರನ್ನು ಸಂಪರ್ಕಿಸಿ ಪೋಲಿಸರಿಗೆ ದೂರು ನೀಡಿರುತ್ತಾರೆ. ಇದು ಅತ್ಯಂತ ಹೀನಾಯವಾದ ಹಾಗೂ ಮಹಿಳಾ ಸಮಾಜ ತಲೆ ತಗ್ಗಿಸುವಂತಹ ಹೇಯ ಕೃತ್ಯವಾಗಿದೆ. ಈ ಕೃತ್ಯವನ್ನು ವಿಮೆನ್ ಇಂಡಿಯಾ ಮೂವ್ಮೆಂಟ್ (WIM ) ತೀವ್ರವಾಗಿ ಖಂಡಿಸುತ್ತದೆ ಎಂದು ಮಂಗಳೂರು ನಗರ ಜಿಲ್ಲಾಧ್ಯಕ್ಷರಾದ ನಿಶಾ ವಾಮಂಜೂರು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ಬ್ಯೂಟಿಪಾರ್ಲರ್ ನ ಮಾಲಕಿಯನ್ನು ಹಾಗೂ ಅಲ್ಲಿರುವ ಇತರ ಸಿಬ್ಬಂದಿಗಳನ್ನು ವಿಚಾರಣೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಕಠಿಣ ಶಿಕ್ಷೆಗೊಳಪಡಿಸಬೇಕು ಹಾಗೂ ಕೂಡಲೇ ಬ್ಯೂಟಿಪಾರ್ಲರನ್ನು ಶಾಶ್ವತವಾಗಿ ಮುಚ್ಚಿಸಬೇಕೆಂದು ಆಗ್ರಹಿಸಿದರು.
ಅಲ್ಲದೆ ಇಂತಹ ಬ್ಯೂಟಿಪಾರ್ಲರ್ ಹಾಗೂ ಮಸಾಜ್ ಸೆಂಟರ್'ಗಳ ಹೆಸರುಗಳಲ್ಲಿ ಬೆಳಕಿಗೆ ಬಾರದ ಎಷ್ಟೋ ಘಟನೆಗಳು ನಡೆಯುತ್ತಿರುತ್ತವೆ ಎಂದು ಸಾಮಾಜಿಕ ವಲಯದಲ್ಲಿ ಕೇಳಿಬರುತ್ತಿದ್ದು, ಪೊಲೀಸ್ ಇಲಾಖೆಯು ಇಂತಹ ಅನೈತಿಕ ಚಟುವಟಿಕೆಗಳನ್ನು ನಡೆಸುವ ಅಂಗಡಿಗಳನ್ನು ಶೀಘ್ರವೇ ಪತ್ತೆಹಚ್ಚಿ ಶಾಶ್ವತವಾಗಿ ಮುಚ್ಚಿಸಬೇಕು ಮತ್ತು ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







