ಉಡುಪಿ ಎಸ್ಪಿ ಕಚೇರಿಯಲ್ಲಿ ದಲಿತರ ಕುಂದುಕೊರತೆ ಸಭೆ : ಡಿಸಿ ವರ್ಗಾವಣೆ ನಿರ್ಣಯಕ್ಕೆ ದಲಿತ ಮುಖಂಡರಿಂದ ಆಗ್ರಹ

ಉಡುಪಿ: ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ದಲಿತರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ದಲಿತ ದೌರ್ಜನ್ಯ ನಡೆದ ಸ್ಥಳಕ್ಕೆ ಭೇಟಿ ಕೊಡುತ್ತಿಲ್ಲ. ಹಾಗಾಗಿ ಅವರ ವರ್ಗಾವಣೆಗೆ ನಿರ್ಣಯ ಮಾಡುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಛೇರಿಯಲ್ಲಿ ಶನಿವಾರ ಕರೆಯಲಾದ ದಲಿತರ ಕುಂದು ಕೊರತೆಗಳ ಸಭೆಯಲ್ಲಿ ಆಗ್ರಹ ಕೇಳಿಬಂತು.
ದಲಿತರ ಮನೆ ಬಿದ್ದು ಸೂರಿಲ್ಲದೆ ಹೆಬ್ರಿ ಅಂಬೇಡ್ಕರ್ ಭವನದಲ್ಲಿ ಕಳೆದ ಹಲವು ತಿಂಗಳುಗಳಿಂದ ಬದುಕು ಸಾಗಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಈವರೆಗೆ ಬಡ ದಲಿತ ಕುಟುಂಬವನ್ನು ಭೇಟಿ ಮಾಡಿ, ಪುರ್ನವಸತಿ ಕಲ್ಪಿಸಿಲ್ಲ. ಸಾಕಷ್ಟು ಭೂಮಿ ಸಮಸ್ಯೆಗಳಿದ್ದರೂ ಪರಿಹರಿಸುತ್ತಿಲ್ಲ. ಜಿಲ್ಲಾಡಳಿತ ದಲಿತರ ಪಾಲಿಗೆ ಸಂಪೂರ್ಣ ನಿಷ್ಕ್ರೀಯವಾಗಿದೆಂದು ದಲಿತ ಮುಖಂಡರು ಆರೋಪಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ವಿವಿಧ ಇಲಾಖೆಗಳ ಅಧಿಕಾರಿಗಳು ಕೂಡ ಯಾವುದೇ ಸಮಸ್ಯೆಗಳಿಗೆ ಸ್ಪಂಧಿಸುತ್ತಿಲ್ಲ. ಜಿಲ್ಲಾ ಸಹಕಾರ ಸಂಘದ ಅಧಿಕಾರಿ ತಮ್ಮನ್ನು ಭೇಟಿಯಾಗುವವರು ಸಂಜೆ 3.30 ರಿಂದ 5.30ರ ಒಳಗೆ ಭೇಟಿಯಾಗಬೇಕೆಂದು ನಾಮಫಲಕವನ್ನೇ ಹಾಕಿ ಬಿಟ್ಟಿದ್ದಾರೆ ಎಂದು ಮುಖಂಡರು ದೂರಿದರು.
ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ತನಿಖಾಧಿಕಾರಿ ತೀರಾ ನಿರ್ಲಕ್ಷ ವಹಿಸಿ ಬಿ ರಿಪೋರ್ಟ್ ಹಾಕುತ್ತಿದ್ದಾರೆ. ಕೊರಗ ಸಮೂದಾಯದವರು ತಮಗಾದ ಅನ್ಯಾಯಕ್ಕೆ ಹತ್ತು ದಿನಗಳಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಅಹೋ ರಾತ್ರಿ ಧರಣಿ ನಡೆಸುತ್ತಿದ್ದರೂ ಅವರ ಸಮಸ್ಯೆ ಬಗೆಹರಿಸುವತ್ತ ಆಸಕ್ತಿ ತೋರಿಸುತ್ತಿಲ್ಲ ಎಂದು ದಲಿತ ಮುಖಂಡರು ಆರೋಪಿಸಿದರು.
ದಲಿತರ ಮೇಲಿನ ದೌರ್ಜನ್ಯಕ್ಕಾಗಿ ಆರಂಭಿಸಲಾದ ವಿಶೇಷ ಪೊಲೀಸ್ ಠಾಣೆಯು ಸರಿಯಾಗಿ ಕಾರ್ಯಾಚರಿಸುತ್ತಿಲ್ಲ ಮತ್ತು ಅಲ್ಲಿ ಅವಶ್ಯಕ ಸಿಬ್ಬಂದಿಗಳ ನೇಮಕ ಇನ್ನೂ ಮಾಡಿಲ್ಲ. ಈ ಎಲ್ಲ ಕಾರಣಗಳಿಂದ ಜಿಲ್ಲಾಧಿಕಾರಿಯವರ ವರ್ಗಾವಣೆಗೆ ಈ ಸಭೆಯಲ್ಲಿ ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸಬೇಕೆಂದು ದಲಿತ ಮುಖಂಡರು ಆಗ್ರಹಿಸಿದರು.
ಸಭೆಯಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್, ದಸಂಸ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ದಲಿತ ಮುಖಂಡರಾದ ಉದಯ ಕುಮಾರ್ ತಲ್ಲೂರು, ಜಯನ್ ಮಲ್ಪೆ, ವಿಶ್ವನಾಥ್ ಪೇತ್ರಿ, ಸಂಜೀವ ಬಳ್ಕೂರು, ರಮೇಶ್ ಕೋಟ್ಯಾನ್, ಶ್ಯಾಮ ಸುಂದರ ತೆಕ್ಕಟ್ಟೆ, ಸುರೇಶ ಹಕ್ಲಾಡಿ, ಚಂದ್ರ ಆಲ್ತಾರು, ಮಂಜುನಾಥ ಬಾಳ್ಕುದ್ರು, ಸುರೇಶ ಬಾರ್ಕೂರು, ವಡ್ಡರ್ಸೆ ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು.







