ಸಾರ್ವಜನಿಕ ದೂರಗಳಿಗೆ ತ್ವರಿತವಾಗಿ ಸ್ಪಂದಿಸಲು ಡಿಸಿ ಸೂಚನೆ: ಮಂಗಳೂರು ತಾಲೂಕು ಕಚೇರಿಗೆ ಭೇಟಿ

ಮಂಗಳೂರು: ಸಾರ್ವಜನಿಕರ ಕುಂದುಕೊರತೆಗಳಿಗೆ ತ್ವರಿತವಾಗಿ ಸ್ಪಂದಿಸಿ ಪರಿಹಾರ ಒದಗಿಸುವಂತೆ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.
ಮಂಗಳೂರು ತಾಲೂಕು ಕಚೇರಿಯ ಮಿನಿ ವಿಧಾನಸೌಧಕ್ಕೆ ಬುಧವಾರ ಅವರು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅಧೀನ ಅಧಿಕಾರಿಗಳೊಂದಿಗೆ ಮಾತನಾಡಿದರು.
ತಾಲೂಕು ಕಚೇರಿಯು ಸಾರ್ವಜನಿಕರಿಗೆ ಅತಿ ಮುಖ್ಯ ಸೇವೆ ನೀಡುವ ಕೇಂದ್ರವಾಗಿದೆ. ಸರಕಾರದ ವಿವಿಧ ಯೋಜನೆಗಳಿಗೆ ಕಂದಾಯ ಇಲಾಖೆಯ ಪಾತ್ರವೂ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.
ಮಂಗಳೂರು ತಾಲೂಕಿನಲ್ಲಿ ಬೆಳೆ ಸಮೀಕ್ಷೆ ಹಾಗೂ ಫ್ರೂಟ್ ತಂತ್ರಾಂಶ ನೋಂದಣಿ ಪ್ರಗತಿ ಪರಿಶೀಲಿಸಿದ ಅವರು ನಿರೀಕ್ಷಿತ ಗುರಿ ಸಾಧನೆ ಆಗದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಹೆಚ್ಚು ಒತ್ತು ನೀಡಲು ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಿದರು. ರೈತರು ಸ್ವತ: ಮುಂದೆ ಬಂದು ಆಧಾರ್ ಮಾಹಿತಿಯೊಂದಿಗೆ ಫ್ರೂಟ್ ತಂತ್ರಾಂಶದಲ್ಲಿ ನೋಂದಣಿ ಮಾಡಬೇಕು. ಇದರಿಂದ ಮುಂದಿನ ದಿನಗಳಲ್ಲಿ ಬೆಳೆ ಪರಿಹಾರ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ಡಿಸಿ ತಿಳಿಸಿದರು.
ಈ ಸಂದರ್ಭ ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.







