ಮಂಗಳೂರು ವಿ.ವಿ.ಯಲ್ಲಿ ʼಕೊರತೆ ಬಜೆಟ್ʼ ಮಂಡನೆ
ʼಶೈಕ್ಷಣಿಕ ಮಂಡಳಿಯ ಸಭೆʼ

ಮಂಗಳೂರು : ಮಂಗಳೂರು ವಿಶ್ವ ವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ ವಿಶೇಷ ಸಭೆಯಲ್ಲಿಂದು 2025-26 ಸಾಲಿನಲ್ಲಿ 200.27 ಕೋಟಿ ರೂ. ವೆಚ್ಚದ 36.98 ಕೋಟಿ ರೂ. ಕೊರತೆಯ ಮುಂಗಡ ಪತ್ರವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ರವರ ಅಧ್ಯಕ್ಷತೆ ಯಲ್ಲಿ ಹಣಕಾಸು ಅಧಿಕಾರಿ ಪ್ರೊ.ವೈ.ಸಂಗಪ್ಪ ಮಂಡಿಸಿದರು.
2025-26ನೇ ಸಾಲಿನಲ್ಲಿ ಯೋಜನೇತರ ಆದಾಯ 129.88 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, 2024-25ನೇ ಸಾಲಿನಲ್ಲಿ 143.22 ಕೋಟಿ ರೂ. ಆಗಿತ್ತು. 2024-25ನೇ ಸಾಲಿಗೆ ಹೋಲಿಸಿದರೆ ಪ್ರಸ್ತುತ ಸಾಲಿನ ಯೋಜನೇತರ ಆದಾಯದಲ್ಲಿ 13.34 ಕೋಟಿ ರೂ. ಕೊರತೆಯಾಗಿರುತ್ತದೆ. ಈ ಪ್ರಸ್ತಾವನೆಯಲ್ಲಿ ರಾಜ್ಯ ಸರ್ಕಾರದ ವೇತನ ಅನುದಾನ, ಪಿಂಚಣಿ ಅನುದಾನ ಹಾಗೂ ಆಂತರಿಕ ಸಂಪನ್ಮೂಲಗಳಿಂದ ಸಂಗ್ರಹವಾಗುವ ಅನುದಾನಗಳು ಒಳಗೊಂಡಿವೆ ಎಂದು ಅವರು ತಿಳಿಸಿದ್ದಾರೆ.
2025-26ನೇ ಸಾಲಿನಲ್ಲಿ ಯೋಜನೇತರ ಖರ್ಚು 164.14 ಕೋಟಿ ರೂ. ಎಂದು ಅಂದಾಜಿಸಲಾಗಿದ್ದು, 2024-25ನೇ ಸಾಲಿನಲ್ಲಿ 161.99 ಕೋಟಿ ರೂ. ಆಗಿದ್ದು, 2024-25ನೇ ಸಾಲಿಗೆ ಹೋಲಿಸಿದರೆ ಪ್ರಸ್ತುತ ಸಾಲಿನಲ್ಲಿ 2.15 ಕೋಟಿ ರೂ. ಹೆಚ್ಚಾಗಿರುತ್ತದೆ. ಇದರಲ್ಲಿ ವೇತನ ಭತ್ಯೆಗಳು, ಮಾಸಿಕ ಪಿಂಚಣಿ, ನಿವೃತ್ತಿ ಸೌಲಭ್ಯಗಳು, ತಾತ್ಕಾಲಿಕ ಸಿಬ್ಬಂದಿಗಳ ವೇತನ, ಹೊರಗುತ್ತಿಗೆ ಸಿಬ್ಬಂದಿಗಳ ವೇತನ, ಅತಿಥಿ ಉಪನ್ಯಾಸ, ಕರುಗಳ ವೇತನ, ಆಡಳಿತಾತ್ಮಕ ವೆಚ್ಚ, ಘಟಕ ಕಾಲೇಜುಗಳ ವೆಚ್ಚ, ಪರೀಕ್ಷಾ ವೆಚ್ಚ ಹಾಗೂ ಇನ್ನಿತರ ವೆಚ್ಚಗಳು ಸೇರಿವೆ.
2025-26ನೇ ಸಾಲಿನಲ್ಲಿ ಯೋಜನೆ ಆದಾಯ 28.79 ಕೋಟಿ ರೂ. ಅಂದಾಜಿಸಿದ್ದು, 2024-25ನೇ ಸಾಲಿನಲ್ಲಿ 24.61 ಕೋಟಿ ರೂ. ಆಗಿದ್ದು, 4.18 ಕೋಟಿ ರೂ. ಹೆಚ್ಚಾಗಿರುತ್ತದೆ. ಇದರಲ್ಲಿ ಅಭಿವೃದ್ಧಿ ಅನುದಾನ, ಇತರೆ ಅನುದಾನ, ಕಾರ್ಯಕ್ರಮ, ದತ್ತಿನಿಧಿ ಹಾಗೂ ಪ್ರಾಯೋಜಿತ ಕಾರ್ಯಕ್ರಮಗಳು ಸೇರಿವೆ. 2025-26ನೇ ಸಾಲಿನಲ್ಲಿ 33.48 ಕೋಟಿ ರೂ. ಖರ್ಚನ್ನು ಅಂದಾಜಿಸಿದ್ದು, 2024-25ರಲ್ಲಿ 33.65 ರೂ., 17.00 ರೂ. ಕಡಿಮೆಯಾಗಿರುತ್ತದೆ.
2025-26ನೇ ಸಾಲಿನಲ್ಲಿ ಒಟ್ಟು ಸ್ವೀಕೃತಿ 163.29 ಕೋಟಿ ರೂ. ಅಂದಾಜಿಸಿದ್ದು, ಖರ್ಚು 200.27 ಕೋಟಿ ರೂ. ಅಂದಾಜಿಸಲಾಗಿದ್ದು, 36.98 ಕೋಟಿ ರೂ. ಕೊರತೆಯಾಗಿರುತ್ತದೆ. ವಿಶ್ವವಿದ್ಯಾನಿಲಯದ ಆಂತರಿಕ ಸಂಪನ್ಮೂಲದಿಂದಲೇ ಪಾವತಿಸಲಾಗುತ್ತಿದೆ. ಅಲ್ಲದೆ ನಿವೃತ್ತ ಸಿಬ್ಬಂದಿಗಳ ಮಾಸಿಕ ಪಿಂಚಣಿ ಪಾವತಿಗೆ ಅಗತ್ಯವಿರುವ ಹೆಚ್ಚುವರಿ ಮೊಬಲಗನ್ನು ಆಂತರಿಕ ಸಂಪನ್ಮೂಲದಿಂದಲೇ ವಿನಿಯೋಗಿಸಬೇಕಾಗಿದೆ. ಹಾಗೆಯೇ ವಿಶ್ವವಿದ್ಯಾನಿಲಯದ ದೈನಂದಿನ ನಿರ್ವಹಣಾ ವೆಚ್ಚಗಳು, ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ ವೆಚ್ಚಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಹೀಗಾಗಿ ಒಂದು ಕಡೆ ವೆಚ್ಚಗಳು ಏರುಗತಿಯಲ್ಲಿದ್ದರೆ, ವಿಶ್ವವಿದ್ಯಾನಿಲಯದ ಆದಾಯವು ಕುಸಿತವನ್ನು ಕಾಣುತ್ತಿದೆ. ಹಾಗೂ ಸರಕಾರವು ವಿಶ್ವವಿದ್ಯಾನಿಯಕ್ಕೆ ನೀಡುವ ಅನುದಾನವನ್ನು ಕುಂಠಿತಗೊಳಿಸಿರುವುದರಿಂದ ವಿಶ್ವವಿದ್ಯಾನಿಲಯದ ಖರ್ಚು-ವೆಚ್ಚದಲ್ಲಿ ಮಿತವ್ಯಯ ಸಾಧಿಸುವುದು ಅತೀ ಅವಶ್ಯವಾಗಿದೆ ಎಂದು ವರದಿಯಲ್ಲಿ ಸಂಗಪ್ಪ ತಿಳಿಸಿದ್ದಾರೆ.
► ವಿ.ವಿ ಯ ಖರ್ಚು ಸರಿದೂಗಿಸಲು ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ ಸಭೆಯಲ್ಲಿ ಕೆಲವು ಸಲಹೆ ನೀಡಿದರು. ವಿಶ್ವವಿದ್ಯಾನಿಲಯ ಆರ್ಥಿಕ ಸ್ವಾವಲಂಬನೆಯತ್ತ ಗಮನಹರಿಸಬೇಕು. ಕೆಲವು ವಿಭಾಗಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಕುಂಟಿತವಾಗುತ್ತಿರುವ ಬಗ್ಗೆ ಗಮನಹರಿಸಬೇಕಾದ ಅಗತ್ಯವಿದೆ ಎಂದರು.
► ವಿಶ್ವವಿದ್ಯಾನಿಲಯದಲ್ಲಿ ಉನ್ನತ ನರ್ಸಿಂಗ್ ವ್ಯಾಸಂಗವನ್ನು ಆರಂಭಿಸುವ ಚಿಂತನೆ ಇದೆ ಎಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ತಿಳಿಸಿದ್ದಾರೆ.
► ವಿಶ್ವವಿದ್ಯಾನಿಲಯ ವ್ಯಾಪ್ತಿಯ ನೆಲ್ಯಾಡಿ, ಕೊಣಾಜೆ, ಬನ್ನಡ್ಕ ಕಾಲೇಜುಗಳನ್ನು ಸರಕಾರ ನಡೆಸಲು ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಕುಲಪತಿ ತಿಳಿಸಿದ್ದಾರೆ.
► ಜು.28ರಿಂದ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ಕಾಲೇಜುಗಳು ಪುನಾರಂಭಗೊಳ್ಳಲಿದೆ ಎಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ಮಾಹಿತಿ ನೀಡಿದರು.
► ಕನಿಷ್ಟ 30 ವಿದ್ಯಾರ್ಥಿಗಳು ನೋಂದಣಿಯಾಗದಿರುವ ಸ್ನಾತಕೋತ್ತರ ಪದವಿ ತರಗತಿಗಳ ವಿಭಾಗವನ್ನು ಮುಂದುವರೆಸುವುದು ಕಷ್ಟ ಎಂದು ಕುಲಪತಿ ಧರ್ಮ ತಿಳಿಸಿದ್ದಾರೆ.
ಸಭೆಯಲ್ಲಿ ಆಡಳಿತ ವಿಭಾಗದ ಕುಲಸಚಿವ ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ ಮೊದಲಾದವರು ಉಪಸ್ಥಿತರಿದ್ದರು.







