ಧರ್ಮಸ್ಥಳ ಪ್ರಕರಣದಲ್ಲಿ ಸಮಗ್ರ ತನಿಖೆಗೆ ಆಗ್ರಹ; ‘ಕೊಂದವರು ಯಾರು’ ತಂಡದಿಂದ ಸೌಜನ್ಯಾ ಮನೆಗೆ ಭೇಟಿ

ಬೆಳ್ತಂಗಡಿ, ನ.11: ಧರ್ಮಸ್ಥಳ ಪ್ರಕರಣದಲ್ಲಿ ಸಮಗ್ರ ತನಿಖೆಗೆ ಆಗ್ರಹಿಸಿ ರಾಜ್ಯಾದ್ಯಂತ ‘ಕೊಂದವರು ಯಾರು’ ಎಂಬ ಪ್ರಶ್ನೆಯೊಂದಿಗೆ ನಡೆಯುತ್ತಿರುವ ಆಂದೋಲನದ ಮುಖಂಡರುಗಳು ಮಂಗಳವಾರ ಧರ್ಮಸ್ಥಳ ಪಾಂಗಳದ ಸೌಜನ್ಯಾ ಅವರ ಮನೆಗೆ ಭೇಟಿ ನೀಡಿ ತಾಯಿ ಕುಸುಮಾವತಿ ಅವರೊಂದಿಗೆ ಮಾತುಕತೆ ನಡೆಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಹೋರಾಟಗಾರರಾದ ಚಂಪಾ, ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ದಾರಿತಪ್ಪಬಾರದು. ಮಹಿಳೆಯರಿಗೆ ಆಗಿರುವ ಅನ್ಯಾಯಗಳಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮ ಉದ್ದೇಶ. ಅದಕ್ಕಾಗಿ ಹೋರಾಟವನ್ನು ಮಾಡುತ್ತಿದ್ದೇವೆ. ಮುಖ್ಯಮಂತ್ರಿಗಳನ್ನು ಮಹಿಳಾ ಆಯೋಗದ ಅಧ್ಯಕ್ಷರನ್ನು ಭೇಟಿಯಾಗಿ ಮನವಿಗಳನ್ನು ಸಲ್ಲಿಸಿದ್ದೇವೆ ಎಂದರು.
ವೇದವಲ್ಲಿ, ಪದ್ಮಲತಾ, ಸೌಜನ್ಯಾ, ಅನೆ ಮಾವುತ ನಾರಾಯಣ, ಅವರ ಸಹೋದರಿ ಯಮುನಾ ಅವರ ಸಾವಿಗೆ ಕಾರಣರಾದವರು ಯಾರು ಎಂಬುದನ್ನು ಬೆಳಕಿಗೆ ತರುವ ಕಾರ್ಯ ಮಾಡಬೇಕಾಗಿದೆ. ಅದೇ ರೀತಿ ಇಲ್ಲಿ ನಡೆದಿರುವ ಅಸಹಜ ಸಾವುಗಳ ಬಗ್ಗೆ, ನಾಪತ್ತೆ ಪ್ರಕರಣಗಳ ಬಗ್ಗೆ ಸಮಗ್ರವಾದ ತನಿಖೆಯಾಗಬೇಕಾಗಿದೆ. ಈ ಕಾರ್ಯವನ್ನು ಎಸ್‌ಐಟಿ ಅಧಿಕಾರಿಗಳು ನಡೆಸಿದರೆ ಸತ್ಯ ಹೊರಬರಲು ಸಾಧ್ಯವಿದೆ ಎಂದು ಅವರು ಹೇಳಿದರು.
ಜ್ಯೋತಿ ಅನಂತ ಸುಬ್ಬರಾವ್ ಮಾತನಾಡಿ, ಮಹಿಳಾ ಆಯೋಗದ ಅಧ್ಯಕ್ಷರು ತನಿಖೆ ನಡೆಸುವಂತೆ ಹೇಳಿದ ಕಾರಣಕ್ಕೆ ಅವರ ವಿರುದ್ಧವೇ ಕೆಲವು ಮಾಧ್ಯಮಗಳು ಆರೋಪ ಮಾಡುತ್ತಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷರು ನೀಡಿರುವ ಹೇಳಿಕೆ ಅತ್ಯಂತ ಸೂಕ್ತವಾಗಿದೆ. ಇದೀಗ ಹೆಣ್ಣು ಮಕ್ಕಳಿಗೆ ನ್ಯಾಯ ಬೇಕು ಎಂದು ಹೋರಾಟ ಮಾಡುತ್ತಿದ್ದೇವೆ. ‘ಕೊಂದವರು ಯಾರು’ ಎಂಬುದನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ಕೊಡಿಸುವ ಕಾರ್ಯ ಮಾಡಬೇಕು ಎಂಬುದು ಮಾತ್ರ ನಮ್ಮ ಬೇಡಿಕೆಯಾಗಿದೆ. ಇದರಲ್ಲಿ ಬೇರೆ ಯಾವ ಹಿತಾಸಕ್ತಿಯೂ ಇಲ್ಲ ಎಂದರು.
ತಂಡದಲ್ಲಿ ಶಶಿಕಲಾ ಶೆಟ್ಟಿ, ಗೀತಾ ಸುರತ್ಕಲ್, ಮಮತಾ, ಸುರೇಖಾ, ಶೈಲಜಾ, ಮಲ್ಲಿಗೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.







