ದೇರಳಕಟ್ಟೆ: ನಿಟ್ಟೆ ವಿವಿ ಕ್ಯಾಂಪಸ್ ನಲ್ಲಿ '5K ಮ್ಯಾರಥಾನ್'

ಕೊಣಾಜೆ: ನಾವು ದೈಹಿಕವಾಗಿ ಸದೃಢರಾಗಿ, ಆರೋಗ್ಯಯುತವಾಗಿದ್ದರೆ ಮಾತ್ರ ಆರೋಗ್ಯಯುತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಆದ್ದರಿಂದ ದೈಹಿಕ ವ್ಯಾಯಾಮಗಳಿಗೆ ಸಮಯ ಮೀಸಲಿರಿಸಿ ನಾವು ಸದಾ ಸಕ್ರಿಯವಾಗಿರಬೇಕು ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ.

ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ನಿಟ್ಟೆ ಇನ್ ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಇದರ ಆಶ್ರಯದಲ್ಲಿ ಗುರುವಾರ ದೇರಳಕಟ್ಟೆ ಕ್ಷೇಮಾ ಕ್ಯಾಂಪಸ್ ನಲ್ಲಿ ನಡೆದ 5 k ಮ್ಯಾರಥಾನ್ ಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಮುಖ್ಯವಾಗಿ ವೈದ್ಯಕೀಯ ಕ್ಷೇತ್ರಗಳಲ್ಲಿ ದುಡಿಯುವರು ಮುಖ್ಯವಾಗಿ ದೈಹಿಕ ಸದೃಡತೆಯನ್ನು ಕಾಪಾಡಿಕೊಳ್ಳಬೇಕಿದೆ. ಅಲ್ಲದೆ ಸಮಾಜಕ್ಕೂ ಇದರ ಮಹತ್ವತೆಯ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯತೆ ಇದೆ ಎಂದರು.

ನಿಟ್ಟೆ ಪರಿಗಣಿತ ವಿವಿಯ ಸಹಕುಲಾಧಿಪತಿ ಪ್ರೊ.ಶಾಂತರಾಮ ಶಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲವೂ ಇದ್ದು ಆರೋಗ್ಯ ಇಲ್ಲದಿದ್ದರೆ ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ದೈಹಿಕ ವ್ಯಾಯಾಮದೊಂದಿಗೆ ಸದಾ ಸಕ್ರಿಯವಾಗಿದ್ದುಕೊಂಡು ಮುನ್ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ನಿಟ್ಟೆ ವಿವಿಯ ಕುಲಪತಿ ಡಾ.ಮೂಡಿತ್ತಾಯ, ಭಾರತ ಸರಕಾರದ ರಾಷ್ಟ್ರೀಯ ಸೇವಾ ಯೋಜನೆಯ ವಲಯ ನಿರ್ದೇಶನಾಲಯದ ನಿರ್ದೇಶಕ ಡಿ.ಕಾರ್ತಿಕೇಯನ್, ರಾಜ್ಯ ಎನ್ನೆಸ್ಸೆಸ್ ಅಧಿಕಾರಿ ಡಾ.ಪ್ರತಾಪ್ ಲಿಂಗಯ್ಯ, ಕುಲಸಚಿವ ಹರ್ಷ ಹಾಳಹಳ್ಳಿ, ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಶಶಿಕುಮಾರ್ ಶೆಟ್ಟಿ, ಕಾರ್ಯಕ್ರಮಾಧಿಕಾರಿಗಳಾದ ಪ್ರತಿಮಾ ರೈ, ಅನ್ಶ್ಯಾ ರೈ, ಡಾ.ವರ್ಷಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ನಿಟ್ಟೆ ಇನ್ ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಡೀನ್ ಡಾ.ಜಯಪ್ರಕಾಶ್ ಶೆಟ್ಟಿ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು.







