ಧರ್ಮಸ್ಥಳ ಪ್ರಕರಣ : ಮತ್ತಿಬ್ಬರಿಂದ ಎಸ್‌ಐಟಿಗೆ ದೂರು

ಬೆಳ್ತಂಗಡಿ, ಆ.8: ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದ ಸಾಕ್ಷಿ ದೂರುದಾರನನ್ನು ತಾವು ಗುರುತಿಸಿದ್ದು, ಆತ ಹೆಣಗಳನ್ನು ಹೂತು ಹಾಕಿರುವುದನ್ನು ನಾವು ಗಮನಿಸಿದ್ದೇವೆ ಎಂದು ಮತ್ತಿಬ್ಬರು ವ್ಯಕ್ತಿಗಳು ಎಸ್‌ಐಟಿ ಮುಂದೆ ಬಂದಿದ್ದು, ಈ ಬಗ್ಗೆ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ. ಈ ದೂರನ್ನು ಸ್ವೀಕರಿಸಿರುವ ಪೊಲೀಸರು ಅದನ್ನು ಎಸ್‌ಐಟಿಗೆ ಹಸ್ತಾಂತರಿಸಿದ್ದಾರೆ.
ಸಾಕ್ಷಿ ದೂರುದಾರ ನೀಡಿರುವ ಹೇಳಿಕೆಯ ವಿಚಾರದಿಂದ ಹಾಗೂ ಮಾಧ್ಯಮದಲ್ಲಿ ನೋಡಿ ಆತನನ್ನು ಗುರುತಿಸಿದ್ದು, ಆತ ಈ ಹಿಂದೆ ರಹಸ್ಯವಾಗಿ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿದ್ದರು. ಗ್ರಾಮದಲ್ಲಿ ಇದೆಲ್ಲ ನಡೆಯುವಾಗ ರಹಸ್ಯವಾಗಿ ಉಳಿಯುವುದಿಲ್ಲ ಈತ ಮೃತದೇಹಗಳನ್ನು ಹೂತು ಹಾಕಿರುವ ಬಗ್ಗೆ ನಮಗೂ ಮಾಹಿತಿಯಿದೆ. ಈ ಬಗ್ಗೆ ಸ್ವತಂತ್ರವಾಗಿ ಮೃತದೆಹಗಳನ್ನು ಹೂತು ಹಾಕಿರುವ ಜಾಗಗಳನ್ನು ಗುರುತಿಸಲು ಅವಕಾಶ ನೀಡಬೇಕು ಎಂದು ದೂರಿನಲ್ಲಿ ವಿನಂತಿಸಿದ್ದಾರೆ.
ಶುಕ್ರವಾರವೂ ಸಿಗದ ಮೃತದೇಹದ ಅವಶೇಷ: ಧರ್ಮಸ್ಥಳ ಗ್ರಾಮದಲ್ಲಿ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದ ಸಾಕ್ಷಿ ದೂರುದಾರ ತೋರಿಸಿದ ಬೊಳಿಯಾರು ಸಮೀಪದ ಅರಣ್ಯದಲ್ಲಿ ಎಸ್‌ಐಟಿ ತಂಡ ಶುಕ್ರವಾರ ಕಾರ್ಯಾಚರಣೆ ನಡೆಸಿದರೂ ಸ್ಥಳದಿಂದ ಯಾವುದೇ ಮೃತದೇಹದ ಅವಶೇಷಗಳು ಪತ್ತೆಯಾಗಿಲ್ಲ.
ಶುಕ್ರವಾರ ಮಧ್ಯಾಹ್ನದ ವೇಳೆ ಎಸ್‌ಐಟಿ ಸಾಕ್ಷಿ ದೂರುದಾರನೊಂದಿಗೆ ಬೊಳಿಯಾರು ಸಮೀಪದ ಅರಣ್ಯಕ್ಕೆ ಅಗಮಿಸಿ ಕಾರ್ಯಾಚರಣೆ ಆರಂಭಿಸಿದ್ದರು. ಸಾಕ್ಷಿ ದೂರುದಾರ ಈ ಪ್ರದೇಶದ ಅರಣ್ಯದಲ್ಲಿ ತಾನು ಮೃತದೇಹ ಹೂತು ಹಾಕಿರುವುದಾಗಿ ಒಂದು ಸ್ಥಳವನ್ನು ಗುರುತಿಸಿದ್ದಾನೆ. ಆತ ಗುರುತಿಸಿದ ಸ್ಥಳದಲ್ಲಿ ಹಿಟಾಚಿಯನ್ನು ಬಳಸಿಕೊಂಡು ಕರ್ಮಿಕರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಯಿತು.
ಆದರೆ ಆತ ತೋರಿಸಿದ ಹೊಸ ಜಾಗದಲ್ಲಿಯು ಯಾವುದೇ ಮೃತದೇಹದ ಅವಶೇಷ ಪತ್ತೆಯಾಗಿಲ್ಲ. ಸಂಜೆ 5:30ರ ಸುಮಾರಿಗೆ ಎಸ್‌ಐಟಿ ಅಧಿಕಾರಿಗಳು ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿ ಹಿಂದಿರುಗಿದ್ದಾರೆ.
ಮಾಹಿತಿ ಕಲೆಹಾಕಿದ ಎಸ್‌ಐಟಿ: ಎಸ್‌ಐಟಿಗೆ ದೂರು ನೀಡಿದ್ದ ಹೋರಾಟಗಾರ ಜಯಂತ್ ಟಿ. ಶುಕ್ರವಾರ ಎಸ್‌ಐಟಿ ಕಚೇರಿಗೆ ಆಗಮಿಸಿದ್ದು, ಈ ಸಂದರ್ಭ ಅಧಿಕಾರಿಗಳು ಅವರಿಂದ ಮಾಹಿತಿಗಳನ್ನು ಕಲೆಹಾಕಿರುವುದಾಗಿ ತಿಳಿದು ಬಂದಿದೆ.
ಜಯಂತ್ ತಾನು ಮೃತದೇಹವೊಂದನ್ನು ಹೂತು ಹಾಕುವುದನ್ನು ನೋಡಿದ್ದೇನೆ ಆ ಸ್ಥಳವನ್ನು ಗುರುತಿ ಸುತ್ತೇನೆ ಎಂದು ಎಸ್‌ಐಟಿ ಮುಂದೆ ಹೇಳಿಕೆ ನೀಡಿದ್ದರು.







