ಧರ್ಮಸ್ಥಳ ದೂರು| ಬಾಹುಬಲಿ ಬೆಟ್ಟದ ತಪ್ಪಲಿನ ಅರಣ್ಯ ಪ್ರದೇಶದಲ್ಲಿ ಸಾಕ್ಷ್ಯ ನಾಶ ಯತ್ನ; ಸುಜಾತಾ ಭಟ್ ಪರ ವಕೀಲರಿಂದ ಗಂಭೀರ ಆರೋಪ

ಬೆಂಗಳೂರು, ಆ.9: ಧರ್ಮಸ್ಥಳ ದೂರು ಸಂಬಂಧಿಸಿದ ಪ್ರಕರಣದಲ್ಲಿ ಸತ್ಯವನ್ನು ಮರೆಮಾಚುವ ಯತ್ನ ನಡೆದಿದೆ. ಬಾಹುಬಲಿ ಬೆಟ್ಟದ ತಪ್ಪಲಿನ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ಸುಮಾರು 10 ಅಡಿ ಎತ್ತರದ ಹೊಸಮಣ್ಣು ಮತ್ತು ತ್ಯಾಜ್ಯ ಸುರಿದಿರುವಂತೆ ಕಾಣುತ್ತದೆ ಎಂದು 2003ರಲ್ಲಿ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತ ಭಟ್ ಅವರ ಪರ ವಕೀಲ ಮಂಜುನಾಥ್ ಎನ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಫೋಟೋ ಸಹಿತ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಶನಿವಾರ ಬಾಹುಬಲಿ ಬೆಟ್ಟದ ತಪ್ಪಲಿನ ಅರಣ್ಯ ಪ್ರದೇಶದಲ್ಲಿ ಉತ್ಖನನ ಕಾರ್ಯ ಮಾಡಲಾಯಿತು. ಆದರೆ ಸಾಕ್ಷ್ಯ ಸಿಗದಿರಲೆಂದೇ ಪಟ್ಟಭದ್ರ ಹಿತಾಸಕ್ತಿಗಳು, ಸಾಕ್ಷ್ಯ ನಾಶ ಮಾಡಲು ಸುಮಾರು ಹತ್ತು ಅಡಿಯಷ್ಟು ಹೊಸ ಮಣ್ಣು ಮತ್ತು ತ್ಯಾಜ್ಯವನ್ನು ಸುರಿದಿರುವಂತೆ ಕಂಡು ಬರುತ್ತಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಹತ್ತಾರು ಅಡಿ ಹೊಸ ಮಣ್ಣು ಸುರಿದಿರುವ ಪ್ರದೇಶದಲ್ಲಿ 7 ಅಡಿ ಆಳ ಅಗೆದರೂ ಹೂತಿಟ್ಟ ಶವಗಳ ಕಳೇಬರಗಳು ಸಿಗುವುದಿಲ್ಲ. ಸಿಗದಿದ್ದರೆ ಅದು ಭೀಮನ ಲೋಪವಲ್ಲ. ವಿಶೇಷ ತನಿಖಾ ತಂಡದ (SIT) ತನಿಖೆಗೆ ಅಡ್ಡಿಪಡಿಸುವ ಉದ್ದೇಶದಿಂದ ಕೆಲವು ವ್ಯಕ್ತಿಗಳು ಈ ಹೇಯ ಕೃತ್ಯ ನಡೆಸಿರಬಹುದು. SITಯು ಈ ಒಳಸಂಚನ್ನು ಭೇದಿಸಲಿದೆ ಎಂಬ ವಿಶ್ವಾಸವಿದೆ ಎಂದು ವಕೀಲರು ಹೇಳಿದ್ದಾರೆ.
“ತ್ಯಾಜ್ಯ ಸುರಿಸಲು ಇತ್ತೀಚೆಗಷ್ಟೇ ಈ ಸೂಕ್ಷ್ಮ ಪ್ರದೇಶವನ್ನು ಆಯ್ಕೆ ಮಾಡಿರುವುದು ಅನುಮಾನಾಸ್ಪದ" ಎಂದು ಪ್ರಕರಣದಲ್ಲಿ ವಕೀಲ ಮಂಜುನಾಥ್ ಎನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







