ಧರ್ಮಸ್ಥಳ ದೂರು| SIT ಕಚೇರಿಗೆ ಪೋಲೀಸ್ ಠಾಣೆ ಮಾನ್ಯತೆ ನೀಡಲು ವಿಳಂಬ; ಸುಜಾತಾ ಭಟ್ ಪರ ವಕೀಲರಿಂದ ಆಕ್ಷೇಪ

ಬೆಂಗಳೂರು, ಆ.7: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅಪರಾಧಗಳ ತನಿಖೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಗ್ರಾಮಸ್ಥರು ವಿಶೇಷ ತನಿಖಾ ತಂಡವನ್ನು (SIT) ಸ್ವಯಂಪ್ರೇರಿತವಾಗಿ ಸಂಪರ್ಕಿಸುತ್ತಿರುವುದು ಸ್ವಾಹತಾರ್ಹ. ಆದರೆ ತನಿಖಾ ಪ್ರಕ್ರಿಯೆ ಸುಗಮವಾಗಿ ನಡೆಯಬೇಕಾದ ಸಂದರ್ಭದಲ್ಲೇ, SIT ಕಚೇರಿಗೆ ಪೋಲೀಸ್ ಠಾಣೆಯ ಮಾನ್ಯತೆ ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು, 2003ರಲ್ಲಿ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಪರ ವಕೀಲರಾದ ಮಂಜುನಾಥ್ ಎನ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, "SIT ರಚನೆಯ ಆದೇಶ ಹೊರಬಂದ ಕ್ಷಣದಿಂದಲೂ, ನಾವು ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಅಡಿಯಲ್ಲಿ SIT ಕಚೇರಿಯನ್ನು ಅಧಿಕೃತ ಪೋಲೀಸ್ ಠಾಣೆಯಾಗಿ ಘೋಷಿಸಲು ಮನವಿ ಸಲ್ಲಿಸಿದ್ದೆವು. ಆದರೂ ಈವರೆಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ," ಎಂದು ತಿಳಿಸಿದ್ದಾರೆ.
ಈ ವಿಳಂಬದಿಂದಾಗಿ ಅನಾನುಕೂಲತೆಗಳು ಉಂಟಾಗುತ್ತಿದ್ದು, SIT ಗೆ ಸಹಕರಿಸಲು ಸ್ಥಾಪಿಸಲಾದ ಸಹಾಯವಾಣಿಯ ಪೂರ್ಣ ಪ್ರಯೋಜನವೂ ಆಗುತ್ತಿಲ್ಲ ಎಂದು ವಕೀಲ ಮಂಜುನಾಥ್ ಎನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







