ಧರ್ಮಸ್ಥಳ| ಲಾಡ್ಜ್‌ನಲ್ಲಿ ಪತ್ತೆಯಾದ ಮಹಿಳೆಯ ಮೃತದೇಹವನ್ನು ಪೊಲೀಸರು ಕಾನೂನಾತ್ಮಕ ಮಹಜರು ನಡೆಸಿಲ್ಲ: ಜಯಂತ್ ಟಿ. ಆರೋಪ

ಬೆಳ್ತಂಗಡಿ : ಧರ್ಮಸ್ಥಳದ ಲಾಡ್ಜ್‌ನಲ್ಲಿ ಸುಮಾರು 40 ವರ್ಷ ವಯಸ್ಸಿನ ಮಹಿಳೆಯೊಬ್ಬರ ಮೃತದೇಹ ಹತ್ಯೆಗೊಳ ಗಾದ ರೀತಿಯಲ್ಲಿ ಪತ್ತೆಯಾದ ಪ್ರಕರಣದಲ್ಲಿ ಪೊಲೀಸರು ಕಾನೂನಾತ್ಮಕ ಮಹಜರು ಪ್ರಕ್ರಿಯೆ ಅನುಸರಿಸದೆ ಶವ ಪತ್ತೆಯಾದ ದಿನವೇ ದಫನ ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಜಯಂತ್ ಟಿ ಆರೋಪಿಸಿದ್ದಾರೆ.
ಅವರು ಬೆಳ್ತಂಗಡಿ ಎಸ್ ಐ ಟಿ ಠಾಣೆಗೆ ಶನಿವಾರ ದೂರು ನೀಡಲು ಬಂದಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು.
2010ರ ಎ.6ರಂದು ಧರ್ಮಸ್ಥಳ ವಸತಿ ಗೃಹದಲ್ಲಿ ಪತ್ತೆಯಾದ ಸಂಶಯಾಸ್ಪದ ಮೃತದೇಹದ ವಿಚಾರದಲ್ಲಿ ದಫನಪೂರ್ವ ಮಹಜರು ಮತ್ತಿತರ ಕಾನೂನು ಪ್ರಕ್ರಿಯೆಗಳನ್ನು ಸಮರ್ಪಕವಾಗಿ ನಡೆಸದಿರುವುದು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಪಡೆದುಕೊಂಡಿರುವ ದಾಖಲೆಗಳಿಂದ ಬಹಿರಂಗಗೊಂಡಿರುವುದಾಗಿ ತಿಳಿಸಿದ ಅವರು ಇಂತಹ ಹಲವಾರು ಪ್ರಕರಣಗಳಿದ್ದು ಈ ಎಲ್ಲ ಮಾಹಿತಿಗಳನ್ನು ಎಸ್.ಐ.ಟಿ ತಂಡಕ್ಕೆ ನೀಡುವುದಾಗಿ ತಿಳಿಸಿದರು.
ಇಂದು ಎಸ್ ಐ ಟಿ ಠಾಣೆಯಲ್ಲಿ ಸಂಬಂಧಪಟ್ಟ ಮೇಲಾಧಿಕಾರಿ ಇಲ್ಲದ ಕಾರಣ ಸೋಮವಾರ ಬಂದು ದೂರು ನೀಡುವಂತೆ ಅಧಿಕಾರಿಗಳು ತಿಳಿಸಿರುವುದಾಗಿ ಅವರು ಮಾಹಿತಿ ನೀಡಿದರು.
ಮೃತದೇಹ ಹೂತು ಹಾಕಿದ ಪ್ರಕರಣದ ಬಗ್ಗೆ ಎಸ್.ಐ.ಟಿ ಗೆ ಎಲ್ಲ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದ ಜಯಂತ್ ಅವರು ಈ ಬಗ್ಗೆ ಇನ್ನೂ ಹಲವರು ಸಾಕ್ಷಿಗಳ ಮಾಹಿತಿ ನೀಡಿದ್ದು ಅಧಿಕಾರಿಗಳು ಅವರಿಂದಲೂ ಮಾಹಿತಿ ಪಡೆದಿದ್ದಾರೆ. ಸ್ಥಳವನ್ನು ಗುರುತಿಸುವ ಕಾರ್ಯವನ್ನು ಮಾಡಲಾಗಿದೆ. ಎಸ್.ಐ.ಟಿ ತಂಡ ಈ ಬಗ್ಗೆ ಮುಂದಿನ ತನಿಖೆಯನ್ನು ನಡೆಸುವ ವಿಶ್ವಾಸವಿದೆ ಎಂದು ತಿಳಿಸಿದರು.







