ಮಂಗಳೂರು | ದುರಂತ ನಡೆದ ಎರಡೂ ಸ್ಥಳಗಳಿಗೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ
ಪರಿಹಾರ ಧನದ ಚೆಕ್ ವಿತರಣೆ

ಮಂಗಳೂರು: ಎಡೆಬಿಡದೆ ಸುರಿದ ಭಾರೀ ಮಳೆಗೆ ಗುಡ್ಡ ಜರಿದು ಬಿದ್ದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ನಡೆದ ಮಂಜನಾಡಿ ಗ್ರಾಮದ ಮೊಂಟೆಪದವು ಮತ್ತು ಬೆಳ್ಮ ಗ್ರಾಮದ ಕಾನಕೆರೆಗೆ ಶುಕ್ರವಾರ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲಿಸಿದರು.
ಕಾಂತಪ್ಪ ಪೂಜಾರಿಯ ಮನೆಯಲ್ಲಿ ಮೂವರು ಹಾಗೂ ನೌಶಾದ್‌ರ ಮನೆಯಲ್ಲಿ ಒಬ್ಬ ಬಾಲಕಿ ಮೃತಪಟ್ಟಿದ್ದು, ಈ ಸಂದರ್ಭ ಕುಟುಂಬಕ್ಕೆ ತಲಾ 5 ಲಕ್ಷ ರೂ.ನ ಚೆಕ್ ಹಸ್ತಾಂತರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ವಿಪರೀತ ಮಳೆಯಿಂದ ಗುಡ್ಡ ಜರಿದು ಬಿದ್ದ ಪರಿಣಾಮ ನಾಲ್ಕು ಮಂದಿ ಮೃತಪಟ್ಟಿದ್ದು ಮತ್ತು ಇಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ತೀವ್ರ ಹಾಗೂ ಭಾಗಶಃ ಹಾನಿಯಾದ, ನೀರು ನುಗ್ಗಿದ ಮನೆಗಳಿಗೆ ಸರಕಾರದಿಂದ ಸೂಕ್ತ ಪರಿಹಾರ ಒದಗಿಸುವ ಬಗ್ಗೆ ವ್ಯವಸ್ಥೆ ಮಾಡಲಾಗುವುದು. ಪುನರ್ವಸತಿ ಕಲ್ಪಿಸುವ ಯೋಜನೆಯೂ ಸರಕಾರದ ಮುಂದಿದೆ ಎಂದರು.
Next Story