ಶ್ರೀರಾಮ್ ಜನರಲ್ ಇನ್ಶೂರೆನ್ಸ್ ವಿರುದ್ಧ ದ.ಕ. ಜಿಲ್ಲಾ ಗ್ರಾಹಕರ ನ್ಯಾಯಾಲಯ ಆದೇಶ

ಮಂಗಳೂರು: ವಾಹನದ ಕಳವು ಸಂದರ್ಭ ವಾಹನಕ್ಕೆ ಸೂಕ್ತ ವಿಮೆ ಇದ್ದರೂ ಕೂಡ ಸಕಾರಣವಿಲ್ಲದೆ ವಿಮಾ ಮೊತ್ತ ನಿರಾಕರಿಸಿದ ಶ್ರೀರಾಮ್ ಜನರಲ್ ಇನ್ಶೂರೆನ್ಸ್ ಕಂಪೆನಿಯ ವಿರುದ್ದ ದ. ಕ. ಜಿಲ್ಲಾ ಗ್ರಾಹಕರ ನ್ಯಾಯಾಲಯವು ವಾಹನದ ಮೌಲ್ಯ, 20,000 ರೂ. ದಂಡ, 10,000 ರೂ. ನ್ಯಾಯಾಲಯದ ವೆಚ್ಚ ಮತ್ತು ಬಡ್ಡಿ ಪಾವತಿಸುವಂತೆ ಆದೇಶಿಸಿದೆ.
ಮಂಗಳೂರಿನ ಶಾಂತಪ್ಪಯು. ಎಂಬವರು ತನ್ನ ಗೂಡ್ಸ್ ಟೆಂಪೋವನ್ನು 2023ರ ಡಿ.26ರಂದು ಕೆಲಸ ಮುಗಿಸಿದ ಬಳಿಕ ಪಡೀಲ್ ಎಂಬಲ್ಲಿ ನಿಲುಗಡೆಗೊಳಿಸಿದ್ದರು. ಮರುದಿನ ಬೆಳಗ್ಗೆ ನೋಡಿದಾಗ ವಾಹನ ಕಳವಾಗಿತ್ತು. ಅದಕ್ಕಾಗಿ ತೀವ್ರ ಹುಡುಕಾಟ ಮತ್ತು ಪೊಲಿಸರಿಗೆ ದೂರು ನೀಡಿದರೂ ವಾಹನ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಸದ್ರಿ ವಾಹನದ ವಿಮಾ ಕಂಪೆನಿಗೆ ವಾಹನದ ವಿಮೆಯ ಮೊತ್ತವನ್ನು ಪಾವತಿಸುವಂತೆ ಸೂಕ್ತ ದಾಖಲೆಗಳೊಂದಿಗೆ ಕ್ಲೇಮ್ ಸಲ್ಲಿಸಿದ್ದರೂ ಕೂಡ ವಿಮಾ ಕಂಪೆನಿಯವರು ನಿಲ್ಲಿಸಿದ ವಾಹನಕ್ಕೆ ಫಿಟ್ನೆಸ್ಸ್ ಇಲ್ಲ ಎಂಬ ಅನಗತ್ಯ ಕಾರಣವೊಡ್ಡಿ ಕ್ಲೇಮನ್ನು ನಿರಾಕರಿಸಿರುತ್ತಾರೆ. ಇದರ ವಿರುದ್ದ ಸಲ್ಲಿಸಿದ ದೂರನ್ನು ಕೂಲಂಕಷವಾಗಿ ಪರಿಶೀಲಿಸಿದ ದ.ಕ. ಜಿಲ್ಲಾ ಗ್ರಾಹಕರ ನ್ಯಾಯಾಲಯವು ಕಳವಿನ ಸಂದರ್ಭ ವಾಹನವನ್ನು ದೈನಂದಿನ ಚಟುವಟಿಕೆಯ ನಂತರ ನಿಲುಗಡೆ ಮಾಡಿದ್ದು, ಅದು ಚಾಲನೆಯ ಸ್ಥಿತಿಯಲ್ಲಿ ಇರಲಿಲ್ಲ. ಆದ್ದರಿಂದ ಆಗ ಫಿಟ್ನೆಸ್ಸ್ ಸರ್ಟಿಫಿಕೇಟ್ ಅಪ್ರಸ್ತುತ ಮತ್ತು ಕಳವಿಗೂ ಕ್ಲೇಮ್ ನಿರಾಕರಣೆಗೆ ನೀಡಿರುವ ಕಾರಣಕ್ಕೂ ಯಾವುದೇ ಸಂಬಂಧವಿಲ್ಲ. ವಿಮಾ ಕಂಪೆನಿಯವರಿಂದ ಈ ವಾಹನದ ಮಾಲಕರಿಗೆ ಸೇವಾ ನ್ಯೂನತೆ ಆಗಿರುತ್ತದೆ. ಹಾಗಾಗಿ ಆ ವಾಹನದ ಮೌಲ್ಯದ ಜೊತೆಗೆ 20,000 ರೂ.ದಂಡ, 10,000 ರೂ.ಕೋರ್ಟ್ ವೆಚ್ಚ ಮತ್ತು ಬಡ್ಡಿ ಶೇ. 6 ರಂತೆ ಪಾವತಿಸುವಂತೆ ನ್ಯಾಯಾಲಯವು ವಿಮಾ ಕಂಪೆನಿಗೆ ಆದೇಶಿಸಿದೆ.
ನ್ಯಾಯವಾದಿ ಅನಿಲ್ ಕುಮಾರ್ ಕೆ. ಗ್ರಾಹಕರ ಪರವಾಗಿ ವಾದಿಸಿದ್ದರು.





