ದ.ಕ. ಜಿಲ್ಲಾ ಮಾನವ ಅಭಿವೃದ್ಧಿ ವರದಿಗೆ ನಿಖರ ಮಾಹಿತಿ ನೀಡಲು ಜಿಪಂ ಸಿಇಒ ಸೂಚನೆ

ಮಂಗಳೂರು,ಜ.20: ದ.ಕ.ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ 2031ರ ವರದಿ ತಯಾರಿಕೆಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿ ಮಾಹಿತಿ ನೀಡುವ ಮೂಲಕ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು ಎಂದು ದ.ಕ.ಜಿಪಂ ಸಿಇಒ ನರ್ವಾಡೆ ನಾಯಕ ಕಾರ್ಬಾರಿ ಸೂಚಿಸಿದ್ದಾರೆ.
ದ.ಕ.ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ 2031ರ ವರದಿಗಳ ತಯಾರಿಕೆ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಮಾನವ ಅಭಿವೃದ್ಧಿ ವರದಿಯು ಜಿಲ್ಲೆಯ ಮಾನವ ಅಭಿವೃದ್ಧಿಯ ಸಮಗ್ರ ಚಿತ್ರಣವನ್ನು ನೀಡಿ, ಜನರ ಆಯ್ಕೆ ಗಳನ್ನು ವಿಸ್ತರಿಸುವ ಮೂಲಕ ಸುಸ್ಥಿರ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಜಿಲ್ಲಾ ಮಾನವ ಅಭಿವೃದ್ಧಿ ವರದಿಯು ಜಿಲ್ಲೆಯ ಜನರ ಕಲ್ಯಾಣ, ಶಿಕ್ಷಣ, ಆರೋಗ್ಯ ಮತ್ತು ಆದಾಯದಂತಹ ಅಂಶಗಳನ್ನು ಅಳೆಯುವ ಬಹಳ ಮುಖ್ಯವಾದ ವರದಿಯಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಮಾನವ ಅಭಿವೃದ್ಧಿ ಕೇವಲ ಆರ್ಥಿಕ ಬೆಳವಣಿಗೆಯಲ್ಲ. ಅದು ಜನರ ಬೇಡಿಕೆಗಳನ್ನು ಪೂರೈಸುವುದಾಗಿದೆ ಎಂದು ನರ್ವಾಡೆ ನಾಯಕ ಕಾರ್ಬಾರಿ ಹೇಳಿದರು.
ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಮಾತನಾಡಿ ಎಲ್ಲಾ ಇಲಾಖೆ ಅಧಿಕಾರಿಗಳು ವರದಿ ತಯಾರಿಕೆ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿ ನೀಡುವ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಸಹಕರಿಸಬೇಕು. ಕರ್ನಾಟಕ ರಾಜ್ಯವು ಮಾನವ ಅಭಿವೃದ್ಧಿ ವರದಿಯಡಿ 11ನೇ ಸ್ಥಾನದಲ್ಲಿದೆ. ಪ್ರತಿಯೊಂದು ಕುಟುಂಬಕ್ಕೆ ಮೂಲಭೂತ ಸೌಕರ್ಯಗಳು ದೊರಕು ವಂತಾಗಬೇಕು. ಈ ನಿಟ್ಟಿನಲ್ಲಿ ಇಲಾಖಾಧಿಕಾರಿಗಳು ನಿಖರ ಮಾಹಿತಿ ನೀಡಿದರೆ ದ.ಕ.ಜಿಲ್ಲೆಯು ಉಳಿದ ಜಿಲ್ಲೆಗಳಿಗಿಂತ ಜಿಲ್ಲಾ ಮಾನವ ಅಭಿವೃದ್ಧಿಯಲ್ಲಿ ಮುಂದುವರಿಯಲಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಶ್ರೀನಿವಾಸ್ ರಾವ್ ಭಾಗವಹಿಸಿದ್ದರು.
ಈ ಸಂದರ್ಭ ಜಿಪಂ ಮುಖ್ಯ ಯೋಜನಾಧಿಕಾರಿ ಸಂಧ್ಯಾ ಕೆ.ಎಸ್, ಯೋಜನಾ ಅಂದಾಜು ಮತ್ತು ಮೌಲ್ಯ ಮಾಪನಾಧಿಕಾರಿ ಕೆ.ಎಸ್. ಸುಷ್ಮಾ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.







