ದ.ಕ. ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆಯಲ್ಪಟ್ಟ ಖಾದ್ಯಗಳ ಪಾಕ ಸ್ಪರ್ಧೆ

ಸಾಂದರ್ಭಿಕ ಚಿತ್ರ
ಮಂಗಳೂರು: ಅಂತಾರಾಷ್ಟ್ರೀಯ ಮಟ್ಟದ ವಾಣಿಜ್ಯ ಮೇಳದ ಅಂಗವಾಗಿ ಜಿಲ್ಲೆಗಳಲ್ಲಿ ಪೂರ್ವಭಾವಿಯಾಗಿ ಸಿರಿಧಾನ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಹಾಗೂ ಕೃಷಿ ಇಲಾಖಾ ಸಿಬ್ಬಂದಿ ಹೊರತುಪಡಿಸಿ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಭಾಗವಹಿಸಬಹುದು. ಸಿರಿಧಾನ್ಯಗಳಾದ ಜೋಳ, ರಾಗಿ, ನವಣೆ, ಸಜ್ಜೆ, ಹಾರಕ, ಬರಗು ಮತ್ತು ಸಾಮೆ ಬೆಳೆಗಳಿಂದ ಸಿಹಿ ಅಥವಾ ಖಾರ ಖಾದ್ಯಗಳನ್ನು ತಯಾರಿಸಬಹುದು. ಮರೆತುಹೋದ ಖಾದ್ಯಗಳನ್ನು ಸಿರಿಧಾನ್ಯ ಹೊರತುಪಡಿಸಿ ಇತರೆ ದೇಸಿ ತಳಿಗಳಿಂದ ಬರುವ ಆಹಾರ, ಎಣ್ಣೆ ಕಾಳುಗಳು, ತರಕಾರಿ ಮತ್ತು ಹಣ್ಣುಗಳಿಂದ ತಯಾರಿಸಬಹುದಾಗಿದೆ.
ಸಸ್ಯಾಹಾರ ತಿನಿಸುಗಳಿಗೆ ಮಾತ್ರ ಅವಕಾಶವಿದ್ದು, ಪ್ರತಿ ಸ್ಪರ್ಧಿಯು ಒಂದೇ ತಿನಿಸು (ಅಡುಗೆ) ಸಿರಿಧಾನ್ಯದ ಸಿಹಿ ಅಥವಾ ಖಾರಾ ಅಥವಾ ಮರೆತು ಹೋದ ಖಾದ್ಯವನ್ನು ತಯಾರಿಸಬಹುದು.
ಅಭ್ಯರ್ಥಿಗಳು ಭಾವಚಿತ್ರದೊಂದಿಗೆ ಹೆಸರು, ವಿಳಾಸ ಮತ್ತು ತಯಾರಿಸುವ ಖಾದ್ಯ ಮತ್ತು ಅದಕ್ಕೆ ಬೇಕಾಗುವ ಸಾಮಗ್ರಿಗಳು, ತಯಾರಿಸಲು ಬೇಕಾಗುವ ಸಮಯ ಹಾಗೂ ತಯಾರಿಸುವ ವಿಧಾನದ ಸಂಕ್ಷಿಪ್ತ ಮಾಹಿತಿಯೊಂದಿಗೆ 2026ರ ಜ.3ರೊಳಗೆ ಕಚೇರಿಯ ಇಮೇಲ್ jdagrimng@gmail.comಗೆ ಅಥವಾ ವಾಟ್ಸ್ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಖುದ್ದಾಗಿ/ ಪೋಸ್ಟ್ ಮೂಲಕ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಲೋಕೋಪಯೋಗಿ ಕಟ್ಟಡ ಸಂಕೀರ್ಣ, ನೆಹರೂ ಮೈದಾನ ರಸ್ತೆ, ದ.ಕ. ಜಿಲ್ಲೆ, ಮಂಗಳೂರು-575001 ವಿಳಾಸಕ್ಕೆ ಕಳುಹಿಸಬಹುದು.
ಅರ್ಜಿಯಲ್ಲಿ ನಮೂದಿಸಿದ ತಿನಿಸನ್ನು ಮನೆಯಲ್ಲಿಯೇ ತಯಾರಿಸಿ ತಂದು ಸ್ಪರ್ಧೆಯ ದಿನ (ಜ.7)ದಂದು ಬೆಳಗ್ಗೆ 10ಕ್ಕೆ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಪ್ರದರ್ಶಿಸಲು ಅವಕಾಶವಿರುತ್ತದೆ.
ಸಿರಿಧಾನ್ಯ ಸಿಹಿ ಸಿರಿಧಾನ್ಯ ಖಾರ ಹಾಗೂ ಮರೆತುಹೋದ ಖಾದ್ಯಗಳ ಮೂರು ವಿಭಾಗಗಳಿದ್ದು, ವಿಜೇತರಿಗೆ ಪ್ರಥಮ ಬಹುಮಾನ 5,000 ರೂ, ದ್ವಿತೀಯ 3,000 ರೂ.ಹಾಗೂ ತೃತೀಯ 2,000 ರೂ.ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ನಮೂನೆ ಪಡೆಯಲು ಜಂಟಿ ಕೃಷಿ ನಿರ್ದೇಶಕರ ಕಚೇರಿ (ದೂ.ಸಂ: 0824-2423604 ಅಥವಾ ವಾಟ್ಸ್ಆಪ್ 9972718512/8792046592ನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರ ಪ್ರಕಟನೆ ತಿಳಿಸಿದೆ.







