ಬ್ಯಾರಿ ಅಕಾಡಮಿಯಿಂದ ದ.ಕ. ಜಿಲ್ಲಾ ಮಟ್ಟದ ದಫ್ ಸ್ಪರ್ಧೆ: ರೆಂಜಾಡಿಯ ತಾಜುಲ್ ಹುದಾ ತಂಡ ಪ್ರಥಮ

ಮಂಗಳೂರು, ಡಿ.23: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಬೆಳ್ತಂಗಡಿ ತಾಲೂಕಿನ ಜೋಗಿಬೆಟ್ಟು ರಿಫಾಯಿ ಜುಮಾ ಮಸ್ಜಿದ್ ಆಡಳಿತ ಸಮಿತಿಯ ಸಹಯೋಗದೊಂದಿಗೆ ರಿಫಾಯಿ ಜುಮಾ ಮಸ್ಜಿದ್ ವಠಾರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ದ.ಕ. ಜಿಲ್ಲಾ ಮಟ್ಟದ ದಫ್ ಸ್ಪರ್ಧೆಯಲ್ಲಿ ಉಳ್ಳಾಲ ತಾಲೂಕಿನ ರೆಂಜಾಡಿಯ ತಾಜುಲ್ ಹುದಾ ದಫ್ ತಂಡ ಪ್ರಥಮ ಮತ್ತು ಮಂಗಳೂರು ತಾಲೂಕಿನ ಕೂಳೂರಿನ ಮುಹಿಯ್ಯುದ್ದೀನ್ ದಫ್ ತಂಡ ದ್ವಿತೀಯ ಹಾಗೂ ಉಳ್ಳಾಲ ತಾಲೂಕಿನ ಬರ್ವದ ಶಂಸುಲ್ ಹುದಾ ದಫ್ ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನಡೆದ ತಾಲೂಕು ಮಟ್ಟದ ದಫ್ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಗಳು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಹಾರಿಸ್ ಮದನಿ ಪಾಟ್ರಕೋಡಿ, ಎ.ಐ. ಝಕರೀಯ ಕಡಬ, ಆರ್.ಕೆ.ಮದನಿ ಅಮ್ಮೆಂಬಳ ಸ್ಪರ್ಧೆಯ ತೀರ್ಪುಗಾರರಾಗಿದ್ದರು. ದ.ಕ. ಮತ್ತು ಉಡುಪಿ ಜಿಲ್ಲಾ ದಫ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ಲತೀಫ್ ನೇರಳಕಟ್ಟೆ ಸ್ಪರ್ಧೆಯನ್ನು ನಿರೂಪಿಸಿದರು.
ಜಿಲ್ಲಾ ಮಟ್ಟದ ದಫ್ ಸ್ಪರ್ಧೆಯನ್ನು ರಿಫಾಯಿ ಜುಮಾ ಮಸ್ಟಿದ್‌ನ ಖತೀಬ್ ಅಲ್ಹಾಜ್ ಯು.ಕೆ.ಖಲಂದರ್ ಮದನಿ ಉದ್ಘಾಟಿಸಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು. ಎಚ್. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಿಫಾಯಿ ಜುಮಾ ಮಸ್ಜಿದ್ ಆಡಳಿತ ಸಮಿತಿಯ ಅಧ್ಯಕ್ಷ ಎಂ.ಜಿ. ಅಬೂಬಕರ್ ಪುತ್ತು, ಎಂ.ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್ ಸ್ಥಾಪಕ ರಶೀದ್ ವಿಟ್ಲ, ಉದ್ಯಮಿಗಳಾದ ಉಮರ್ ಹಾಜಿ, ಅಬ್ದುಲ್ ಸಲೀಂ ದಾವೂದ್, ಅಶ್ರಫ್, ಜೋಗಿಬೆಟ್ಟು ಖುವ್ವತುಲ್ ಇಸ್ಲಾಂ ಯಂಗ್‌ಮೆನ್ಸ್ ಅಧ್ಯಕ್ಷ ಅಶ್ರಫ್ ಎಂ.ಜಿ. ಮತ್ತಿತರರು ಭಾಗವಹಿಸಿದ್ದರು.
ಅಕಾಡಮಿಯ ಸದಸ್ಯರಾದ ಹಮೀದ್ ಹಸನ್ ಮಾಡೂರು, ಅಬೂಬಕ್ಕರ್ ಅನಿಲಕಟ್ಟೆ, ಶರೀಫ್ ಭಾರತ್ ಬಾಳಿಲ, ಅನ್ಸಾರ್ ಕಾಟಿಪಳ್ಳ ಉಪಸ್ಥಿತರಿದ್ದರು. ಸದಸ್ಯ ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.







