ದ.ಕ. ಜಿಲ್ಲೆಯ ಧಾರಣಾ ಸಾಮರ್ಥ್ಯ ಅಧ್ಯಯನಕ್ಕೆ ಸೂಚನೆ : ಬಿ.ಎಂ. ಫಾರೂಕ್

ಮಂಗಳೂರು, ಸೆ.8: ದ.ಕ.ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಸಂಬಂಧಿಸಿ ಧಾರಣಾ ಸಾಮರ್ಥ್ಯ ಅಧ್ಯಯನ ನಡೆಸಿ ಸಮಗ್ರ ವರದಿ ನೀಡುವಂತೆ ಸ್ಥಳೀಯ ಪ್ರಾಧಿಕಾರದ ಸಮಿತಿಗೆ ಸೂಚನೆ ನೀಡಲಾಗಿದೆ ಎಂದು ವಿಧಾನ ಪರಿಷತ್‌ನ ಸರಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಬಿ.ಎಂ.ಫಾರೂಕ್ ಹೇಳಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಎರಡು ದಿನಗಳ ಅಧ್ಯಯನ ಪ್ರವಾಸದ ಬಳಿಕ ಅವರು ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಭೌಗೋಳಿಕ ಧಾರಣಾ ಸಾಮರ್ಥ್ಯದ ಬಗ್ಗೆ ಸಮಿತಿ ರಚಿಸಿ ಅಧ್ಯಯನ ನಡೆಸುವಂತೆ ಸ್ಥಳೀಯ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ. ಪ್ರಾಧಿಕಾರದ ವರದಿಯನ್ನು ಭರವಸೆಗಳ ಸಮಿತಿ ಪರಿಶೀಲನೆ ನಡೆಸಿ ರಾಜ್ಯ ಸರಕಾರಕ್ಕೆ ಸಲ್ಲಿಸಲಿದೆ ಎಂದು ಹೇಳಿದರು.
ಹಿಂದೆ ತಾವು ಸಮಿತಿ ಅಧ್ಯಕ್ಷರಾಗಿದ್ದಾಗ ಒಂದೂವರೆ ವರ್ಷದಲ್ಲಿ 2000 ಭರವಸೆಗಳಲ್ಲಿ ಶೇ 90ರಷ್ಟು ಭರವಸೆಗಳು ಈಡೇರಿತ್ತು. ಹೊಸ ಸರಕಾರ ಬಂದ ಬಳಿಕ ಹೊಸ ಸಮಿತಿಗೆ ಅಷ್ಟೇ ಭರವಸೆಗಳು ಬಂದಿವೆ ಎಂದರು.
*ನೀರಿ ವರದಿ ಪರಿಶೀಲನೆ: ಕೈಗಾರಿಕೆಗಳಿಂದ ಉಂಟಾಗಿರುವ ಪರಿಸರ ಮಾಲಿನ್ಯ ಮತ್ತಿತರ ವಿಚಾರಗಳ ಬಗ್ಗೆ ಸ್ವತಂತ್ರ ಅಧ್ಯಯನ ನಡೆಸಿ ಸಮಗ್ರ ವರದಿ ಸಲ್ಲಿಸುವಂತೆ ನೀರಿ ಸಂಸ್ಥೆಗೆ ಈ ಹಿಂದೆ ಸೂಚಿಸಲಾಗಿತ್ತು. ಇದೀಗ ನೀರಿ ಸಂಸ್ಥೆ ಸಮಿತಿಗೆ ವರದಿ ಸಲ್ಲಿಸಿದೆ. ಗುರುವಾರ ಸಲ್ಲಿಕೆಯಾಗಿರುವ ಆ ವರದಿಯನ್ನು ಇನ್ನಷ್ಟೇ ಸಮಿತಿ ಪರಿಶೀಲನೆ ನಡೆಸ ಬೇಕಾಗಿದೆ ಎಂದು ಮಾಹಿತಿ ನೀಡಿದರು.
ಎಂಆರ್‌ಪಿಎಲ್ ಸಂಸ್ಥೆಗೆ ಡಾ.ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಸೂಚನೆ ನೀಡ ಲಾಗಿತ್ತು. ಅದರಂತೆ ಸುಮಾರು 650 ಮಂದಿ ಸ್ಥಳೀಯರಿಗೆ ಉದ್ಯೋಗ ನೀಡಿದ್ದರೂ ಅದು ಸಿ ಮತ್ತು ಡಿ ದರ್ಜೆಯ ನೌಕರಿಯಾಗಿದೆ. ಎ ಮತ್ತು ಬಿ ನೌಕರಿ ನೀಡಿಲ್ಲ ಎಂದರು.
*ಭೂಗತ ಸುರಂಗ ಮಾರ್ಗ: ಮಂಗಳೂರಿನಲ್ಲಿ ಬೃಹತ್ ಎಲ್‌ಪಿಜಿ ಗ್ಯಾಸ್ ಸಂಗ್ರಹಣೆಗೆ ಭೂಗತ ಸುರಂಗ ನಿರ್ಮಾಣವಾ ಗುತ್ತಿದೆ. ಇದರ ಕಾಮಗಾರಿ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದು ಎರಡನೇ ಭೂಗತ ತೈಲಸಂಗ್ರಹಾಗಾರವಾಗಿದೆ ಎಂದು ಫಾರೂಕ್ ಮಾಹಿತಿ ನೀಡಿದರು.
ವಿಧಾನ ಪರಿಷತ್‌ನ ಸರಕಾರಿ ಭರವಸೆಗಳ ಸಮಿತಿ ಗುರುವಾರ ಸುರಂಗ ಕಾಮಗಾರಿಯ ವೀಕ್ಷಣೆ ನಡೆಸಿದ್ದು, ಎಚ್‌ಪಿಸಿಎಲ್ ಕಂಪೆನಿಯು ಗ್ಯಾಸ್ ಸಂಗ್ರಹಕ್ಕೆ ಸುಮಾರು 500 ಅಡಿ ಆಳದಲ್ಲಿ ಬಂಡೆಯನ್ನು ಈ ಸುರಂಗವನ್ನು ನಿರ್ಮಿ ಸುತ್ತಿದೆ ಎಂದು ಅಧ್ಯಕ್ಷ ಬಿ.ಎಂ. ಫಾರೂಕ್ ಹೇಳಿದರು.
ಭರವಸೆಗಳ ಸಮಿತಿ ಸದಸ್ಯ ಡಾ.ತಳವಾರ ಸಾಬಣ್ಣ, ಕೆಐಎಡಿಬಿ ಜಿಲ್ಲಾ ಅಧಿಕಾರಿ ಸುನಿಲ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







