ಅಂತಾರಾಷ್ಟ್ರೀಯ ಜಾಗತಿಕ ಯುವ ಶೃಂಗಸಭೆಯಲ್ಲಿ ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ನ್ನು ಪ್ರತಿನಿಧಿಸಿದ ಪುತ್ತೂರಿನ ಡಾ.ವಾಜಿದಾ ಬಾನು

ಪುತ್ತೂರು: ದೇರಳಕಟ್ಟೆಯ ಯೆನೆಪೊಯ ವಿಶ್ವವಿದ್ಯಾನಿಲಯದಲ್ಲಿ ಜೂ.4ರಿಂದ 6ರ ತನಕ ಜರುಗಿದ 'ಅಂತಾರಾಷ್ಟ್ರೀಯ ಜಾಗತಿಕ ಯುವ ಶೃಂಗಸಭೆ-2025'ರಲ್ಲಿ ಪುತ್ತೂರಿನ ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ನ ಆಪ್ತ ಸಮಾಲೋಚಕಿ ಮತ್ತು ಪ್ರೇರಕಿ ಡಾ.ವಾಜಿದಾ ಬಾನು ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಎನ್ನೆಸ್ಸೆಸ್ ವಿಭಾಗ ಮತ್ತು ಯೆನೆಪೊಯ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ನಡೆದ ಈ ಜಾಗತಿಕ ಯುವ ಶೃಂಗಸಭೆಯಲ್ಲಿ 18 ವಿವಿಧ ದೇಶಗಳಿಂದ 1200ಕ್ಕೂ ಹೆಚ್ಚು ಪ್ರತಿನಿಧಿಗಳ ಸಮ್ಮುಖದಲ್ಲಿ ಡಾ.ವಾಜಿದಾ ಬಾನು 'ಐಡಿಯಾ ವರ್ಸ್: ಯೂತ್ ಇನ್ನೋವೇಶನ್ ಫಾರ್ ಎ ನ್ಯೂ ಇಂಡಿಯಾ' ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು. ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ನ ಮೂಲ ಉದ್ದೇಶ, ಬೆಳವಣಿಗೆ ಮತ್ತು ದೃಷ್ಟಿಕೋನವನ್ನು ವಿವರಿಸಿದರು.
ಶಿಕ್ಷಣ ವ್ಯವಸ್ಥೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಎದುರಿಸುತ್ತಿರುವ ನೈಜ ಸವಾಲುಗಳನ್ನು ಪರಿಹರಿಸುವ ಒಂದು ಉಪಕ್ರಮವಾಗಿ ವಿದ್ಯಾರ್ಥಿ-ಕೇಂದ್ರಿತ ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿದರು. ಮಾತ್ರವಲ್ಲದೆ ಶಿಕ್ಷಣದಲ್ಲಿ ಬೆಂಬಲ ವ್ಯವಸ್ಥೆಗಳನ್ನು ಮರು ವ್ಯಾಖ್ಯಾನಿಸುವ ತುರ್ತು ಅಗತ್ಯವನ್ನು ಒತ್ತಿ ಹೇಳಿದರು.
ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ಗೆ ಈ ಹೆಮ್ಮೆಯ ಕ್ಷಣವನ್ನು ತಂದು ಕೊಟ್ಟ ಡಾ.ವಾಜಿದಾ ಬಾನುರನ್ನು ಸಂಸ್ಥೆಯ ಅಧ್ಯಕ್ಷ ಅಮ್ಜದ್ ಖಾನ್ ಪೋಲ್ಯ ಅಭಿನಂದಿಸಿದ್ದಾರೆ.
ಡಾ. ವಾಜಿದಾ ಬಾನು ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಇಸ್ಮಾಯೀಲ್ ಎ.ಎಸ್. ಮತ್ತು ಸಫಿಯಾ ಬಾನು ದಂಪತಿಯ ಪುತ್ರಿ.