ಡಿ.27ರಂದು ‘ನಶೆ ಮುಕ್ತ ಮಂಗಳೂರು’ ಅಭಿಯಾನಕ್ಕೆ ಚಾಲನೆ

ಮಂಗಳೂರು: ಮಂಗಳೂರು ನಗರ ಪೊಲೀಸ್ ಸಹಭಾಗಿತ್ವದಲ್ಲಿ ಮೇಕ್ ಎ ಚೇಂಜ್ ಫೌಂಡೇಶನ್ ಆಶ್ರಯದಲ್ಲಿ ‘ನಶೆ ಮುಕ್ತ ಮಂಗಳೂರು’ ಅಭಿಯಾನವನ್ನು 102 ಕಾರ್ಯಕ್ರಮಗಳ ಸಹಿತ ದೊಡ್ಡ ಮಟ್ಟದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ಡಿ.27ರಂದು ಬೆಳಗ್ಗೆ 10:30ಕ್ಕೆ ಟಿ.ಎಂ.ಎ.ಪೈ ಇಂಟರ್‌ನ್ಯಾಷನಲ್ ಕನ್‌ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ಮೇಕ್ ಎ ಚೇಂಜ್ ಫೌಂಡೇಶನ್‌ನ ಸ್ಥಾಪಕ ಅಧ್ಯಕ್ಷ ಸುಹೈಲ್ ಕಂದಕ್ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕರ್ನಾಟಕ ರಾಜ್ಯ ವಿಧಾನ ಸಭೆಯ ಅಧ್ಯಕ್ಷ ಯು.ಟಿ.ಖಾದರ್, ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಚ್.ವಿ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ , ಮಂಗಳೂರು ಬಿಷಪ್, ರಾಮಕೃಷ್ಣ ಮಠದ ಸ್ವಾಮೀಜಿಗಳು ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ, ತುಳುನಾಡಿನ ಪ್ರಸಿದ್ಧ ನಟರು ಕೈ ಜೋಡಿಸಲಿದ್ದಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮವನ್ನು ವಿಶೇಷವಾಗಿ ಯುವಕರಿಗೆ ,ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುತ್ತಿದೆ. ಈ ವರೆಗೆ 6 ಕಾಲೇಜ್ ಕ್ಯಾಂಪಸ್‌ಗಳಲ್ಲಿ ಜಾಗೃತಿ ಕಾರ್ಯಾಗಾರ, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಪೋಸ್ಟರ್ ಅಭಿಯಾನ, ಸಂಘ ಮತ್ತು ಸಂಸ್ಥೆಗಳಲ್ಲಿ ಮಾದಕ ವಸ್ತು ಸೇವನೆಯ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಕಾರ್ಯಕ್ರಮವು ಯುವಕರಲ್ಲಿ ಮಾದಕದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸೃಜನಾತ್ಮಕ ಸಮಾಜವನ್ನು ಕಟ್ಟುವ ಉದ್ದೇಶವನ್ನು ಹೊಂದಿದ್ದು , ‘ನಶೆ ಮುಕ್ತ ಮಂಗಳೂರು’ ಅಭಿಯಾನಕ್ಕೆ ಸಂಬಂಧಿಸಿ ಮುಂದಿನ ಜನವರಿ ಯಲ್ಲಿ ಮ್ಯಾರಥಾನ್ ಆಯೋಜಿಸಲು ಚಿಂತನೆ ನಡೆಸಲಾಗಿದ್ದು, ಈ ಕಾರ್ಯಕ್ರಮದಲ್ಲಿ 15,000-20,000 ಮಂದಿ ಭಾಗವಹಿಸಲಿದ್ದಾರೆ ಎಂದು ಸುಹೈಲ್ ಕಂದಕ್ ವಿವರಿಸಿದರು.
ಮಂಗಳೂರಿನ ಸೈಕೋಲಾಜಿಸ್ಟ್ ಡಾ. ರುಕ್ಸಾನ ಮಂಗಳೂರು, ಬಾರ್ನ್ ಅಗೇನ್ ರಿಕವರಿ ಸೆಂಟರ್‌ನ ಸಹ ಸ್ಥಾಪಕ ಗುರು ಪ್ರಸಾದ್, ಮೇಕ್ ಎ ಚೇಂಜ್ ಫೌಂಡೇಶನ್‌ನ ಸಹ ಸ್ಥಾಪಕ ಬಶೀರ್ ಡಿಎಕ್ಸ್ , ಭೀಮ್ ಅರ್ಮಿ ಕರ್ನಾಟಕ ಏಕ್ತಾ ಮಿಷನ್‌ನ ರಾಜ್ಯ ಸಂಯೋಜಕ ದಿನೇಶ್ ಮುಳೂರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







