ಕೊಣಾಜೆ ಪೊಲೀಸ್ ಠಾಣೆಗೆ ಹೆಚ್ಚುವರಿ ಗಸ್ತು ವಾಹನ ನಿಯೋಜಿಸಲು ಆಗ್ರಹಿಸಿ ಉಪ ಪೊಲೀಸ್ ಆಯುಕ್ತರಿಗೆ ಡಿವೈಎಫ್ಐಯಿಂದ ಮನವಿ

ಕೊಣಾಜೆ: ಉಳ್ಳಾಲ ತಾಲೂಕಿನ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹಲವು ಪ್ರಮುಖ ಗ್ರಾಮಗಳು ಹೆಚ್ಚಿನ ಜನಸಾಂದ್ರತೆಯನ್ನು ಹೊಂದಿರುವ ಪ್ರದೇಶವಾಗಿದ್ದು, ಈ ನಿಟ್ಡಿನಲ್ಲಿ ಪೊಲೀಸ್ ಠಾಣೆಗೆ ಹೆಚ್ಚುವರಿ ಗಸ್ತು ವಾಹನ ನಿಯೋಜಿಸಲು ಆಗ್ರಹಿಸಿ ಉಪ ಪೊಲೀಸ್ ಆಯುಕ್ತರಿಗೆ ಡಿವೈಎಫ್ಐ ನಿಯೋಗವು ಮನವಿ ಸಲ್ಲಿಸಿತು.
ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಪಾವೂರು, ಹರೇಕಳ, ಫಜೀರು, ಕೊಣಾಜೆ, ಬೆಳ್ಮ, ಅಂಬ್ಲಮೊಗರು, ಬಾಳೆಪುಣಿ, ಕುರ್ನಾಡು, ಮಂಜನಾಡಿ, ಬೋಳಿಯಾರ್, ಇರಾ, ಸಜೀಪ ನಡು, ಸಜೀಪ ಪಡು, ನರಿಂಗಾನ ಸೇರಿದಂತೆ 13 ಗ್ರಾಮ ಪಂಚಾಯತ್ ಗಳಿಗೆ ಒಳಪಟ್ಟಿವೆ. ಈ ಎಲ್ಲಾ ಗ್ರಾಮಗಳಲ್ಲಿ ಕಾಲದಿಂದ ಕಾಲಕ್ಕೆ ಜನಸಂಖ್ಯೆ ಹೆಚ್ಚಳಗೊಳ್ಳುತ್ತಿದ್ದು ಅಲ್ಲದೆ ಈ ಭಾಗಗಳಲ್ಲಿ ಕಳ್ಳತನ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಂತವುಗಳು ರಾಜಾರೋಷವಾಗಿ ನಡೆಯುತ್ತಿದ್ದು ಇವುಗಳನ್ನೆಲ್ಲಾ ನಿಯಂತ್ರಿಸಬೇಕಾಗಿದ್ದ ಸ್ಥಳೀಯ ಠಾಣೆಗಳಿಗೆ ವಿಪರೀತ ಒತ್ತಡ ಹೆಚ್ಚಾಗಿದೆ. ಇಲ್ಲಿನ ಜನ ಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳ ಕೊರತೆ, ಪೊಲೀಸರಿಗೆ ಗಸ್ತು ತಿರುಗಲು ಸರಿಯಾದ ವಾಹನದ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ನಾವು ಕಂಡಂತೆ ಇಲ್ಲಿ ಕೇವಲ ಒಂದು ವಾಹನವಷ್ಟೇ ಗಸ್ತು ಸಂದರ್ಭದಲ್ಲಿ ತಿರುಗಾಡುವುದು ಬಿಟ್ಟರೆ ಉಳಿದದ್ದು ಬಳಕೆಗೆ ಅಯ್ಯೋಗ್ಯವಾಗಿ ಶಿಥಿಲಾವಸ್ಥೆಯಲ್ಲಿದೆ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಕೊಣಾಜೆ ಪೊಲೀಸ್ ಠಾಣೆಯ ವ್ಯಾಪ್ತಿಯ ವಿಸ್ತೀರ್ಣವು ತುಂಬಾ ದೊಡ್ಡಮಟ್ಟದ್ದಾಗಿದ್ದು ತುರ್ತು ಸಂದರ್ಭದಲ್ಲಿ ಪೊಲೀಸರಿಗೆ ಒಂದು ಪ್ರದೇಶದಿಂದ ಘಟನಾ ಸ್ಥಳಗಳಿಗೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ತುರ್ತು ಸಂದರ್ಭದಲ್ಲಿ ಸಂತ್ರಸ್ತರು ಪೊಲೀಸರ ಸಹಾಯಕ್ಕೆ ಕರೆಯಿತ್ತರೆ ವಾಹನ ಇಲ್ಲವೆಂಬ ಸಬೂಬು ಹೇಳಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ನಿರ್ಲಕ್ಷ್ಯತನದಿಂದಾಗಿ ಈ ಠಾಣಾ ವ್ಯಾಪ್ತಿಯ ನಿವಾಸಿಗಳು ಸಮಸ್ಯೆಗಳನ್ನು ಅನುಭವಿಸುವಂತಾಗಿದೆ.
ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಈ ಕೂಡಲೇ ಕೊಣಾಜೆ ಪೊಲೀಸ್ ಠಾಣೆ ಎದುರಿಸುತ್ತಿರುವ ಅಗತ್ಯ ಸಿಬ್ಬಂದಿ ಕೊರತೆಗಳ ಸಹಿತ ಇಲ್ಲಿನ ಎಲ್ಲಾ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದ್ದು, ಠಾಣೆಗೆ ಎರಡು ಹೊಸ ಗಸ್ತು ವಾಹನಗಳನ್ನು ಒದಗಿಸಿಕೊಡಲು ಮುಂದಾಗಬೇಕೆಂದು ಈ ಮೂಲಕ ಸಾರ್ವಜನಿಕರ ಪರವಾಗಿ ಒತ್ತಾಯಿಸಿ ಮಾನ್ಯ ಎಸಿಪಿ ಯವರಿಗೆ ಡಿವೈಎಫ್ಐ ನಿಯೋಗ ಮನವಿ ಸಲ್ಲಿಸಿತು.
ನಿಯೋಗದಲ್ಲಿ ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಜ್ವಾನ್ ಹರೇಕಳ,ಉಪಾಧ್ಯಕ್ಷರಾದ ರಝಾಕ್ ಮುಡಿಪು ಮುಖಂಡರಾದ ಇಕ್ಬಾಲ್ ಕೆಎಚ್ ಹರೇಕಳ,ರಫೀಕ್ ಹರೇಕಳ,ಇಬ್ರಾಹಿಂ ಮದಕ,ಅಬೂಬಕರ್ ಜಲ್ಲಿ,ಜಗದೀಶ್ ದೇರಳಕಟ್ಟೆ ಉಪಸ್ಥಿತರಿದ್ದರು.







