ಮಂಗಳೂರು: ಬಹುಕೋಟಿ ವಂಚನೆ ಪ್ರಕರಣದ ಆರೋಪಿಯ ಮನೆ, ಬ್ಯಾಂಕ್ ಖಾತೆ ಸಹಿತ 2.85 ಕೋಟಿ ರೂ. ಮೌಲ್ಯದ ಸೊತ್ತು ಮುಟ್ಟುಗೋಲು

ರೋಷನ್ ಸಲ್ಡಾನ
ಮಂಗಳೂರು: ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ರೋಷನ್ ಸಲ್ಡಾನ ಎಂಬಾತನ ಮನೆ ಮತ್ತು ಬ್ಯಾಂಕ್ ಖಾತೆ ಸೇರಿದಂತೆ ಒಟ್ಟು 2.85 ಕೋಟಿ ರೂ. ಆಸ್ತಿಯನ್ನು ಜಾರಿ ನಿರ್ದೇಶನಾಲಯದ (ಈಡಿ) ಮಂಗಳೂರು ಉಪವಲಯ ಕಚೇರಿಯ ಅಧಿಕಾರಿಗಳು, ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸಾಲ ಕೊಡಿಸುವುದಾಗಿ ನಂಬಿಸಿ ಬಹು ಕೋಟಿ ವಂಚನೆ ಮಾಡಿದ ಆರೋಪದ ಮೇಲೆ ಕಂಕನಾಡಿ ಬೊಲ್ಲಗುಡ್ಡದ ರೋಷನ್ ಸಲ್ಡಾನ, ಡ್ಯಾಫ್ನಿ ನೀತು ಡಿಸೋಜ ಮತ್ತು ಇತರರ ವಿರುದ್ಧ ದಾಖಲಾಗಿರುವ ಎಫ್ಐಆರ್ಗಳ ಆಧಾರದ ಮೇಲೆ ಈಡಿ ತನಿಖೆ ಪ್ರಾರಂಭಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002 (ಪಿಎಂಎಲ್ಇ) ಅಡಿಯಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಈಡಿಯ ಪ್ರಕಟಣೆ ತಿಳಿಸಿದೆ.
ಪಿಎಂಎಲ್ ಇ ಸೆಕ್ಷನ್ 17ರ ಅಡಿಯಲ್ಲಿ ನಡೆಸಿದ ಶೋಧ ಕಾರ್ಯ ಮತ್ತು ನಂತರ ನಡೆಸಿದ ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು, 2024 ಅಕ್ಟೋಬರ್ನಿಂದ 2025 ಜುಲೈ ನಡುವಿನ ಅವಧಿಯಲ್ಲಿ ವಿವಿಧ ಉದ್ಯಮಿಗಳಿಂದ ಸ್ಟ್ಯಾಂಪ್ ಡ್ಯೂಟಿ ನೆಪದಲ್ಲಿ ನಕಲಿ ಕಂಪನಿಗಳ ಮೂಲಕ 49 ಕೋಟಿ ರೂ. ಸಂಗ್ರಹಿಸಿ, ಅವರಿಗೆ ಸಾಲ ಒದಗಿಸುವ ಭರವಸೆ ನೀಡಿದ್ದರು. ಹೀಗೆ ಸಂಗ್ರಹಿಸಿದ ಹಣವನ್ನು ಆರೋಪಿಗಳು ತಮ್ಮ ವೈಯಕ್ತಿಕ ಉದ್ದೇಶ, ವ್ಯವಹಾರಕ್ಕೆ ಬಳಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆಗಸ್ಟ್ನಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಈಡಿಯು, ಆರೋಪಿಗಳ ಬ್ಯಾಂಕ್ ಖಾತೆ, ಬೋಟ್ ಮತ್ತು ಅವುಗಳ ಎಂಜಿನ್ಗಳ ರೂಪದಲ್ಲಿ ಅಂದಾಜು 9.5 ಕೋಟಿ ರೂ. ಮೊತ್ತವನ್ನು ವಶಕ್ಕೆ ಪಡೆದಿದೆ. ಇದರ ಮುಂದುವರಿದ ಭಾಗವಾಗಿ, ರೋಷನ್ ಸಲ್ಡಾನನ 2.14 ರೂ. ಕೋಟಿ ಮೌಲ್ಯದ ಆಸ್ತಿ, ಪಿ.ಎಂ. ಎಂಟರ್ಪ್ರೈಸಸ್ ಬ್ಯಾಂಕ್ ಖಾತೆಯ 70.8 ಲಕ್ಷ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿ ಎಂದು ಈಡಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.







