ಅಧಿಕ ಲಾಭಾಂಶದ ಸಂದೇಶ ನಂಬಿದ ವೃದ್ಧನಿಗೆ ವಂಚನೆ: ಪ್ರಕರಣ ದಾಖಲು

ಮಂಗಳೂರು,ಆ.25:ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ದೊರೆಯುತ್ತದೆ ಎಂದು ಅಪರಿಚಿತ ವ್ಯಕ್ತಿಯೊಬ್ಬ ಕಳುಹಿಸಿದ ವಾಟ್ಸ್‌ಆ್ಯಪ್ ಸಂದೇಶವನ್ನು ನಂಬಿದ ಹಿರಿಯ ವ್ಯಕ್ತಿಯೊಬ್ಬರು 34.15 ಲಕ್ಷ ರೂ. ಕಳಕೊಂಡ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 25ರಂದು ಅಪರಿಚಿತ ವ್ಯಕ್ತಿಯಿಂದ ಹಣ ಹೂಡಿಕೆಯ ಬಗ್ಗೆ ವಾಟ್ಸ್‌ಆ್ಯಪ್ ಸಂದೇಶ ಬಂದಿತ್ತು. ತಾನು ಆತನಲ್ಲಿ ಹೆಚ್ಚಿನ ಮಾಹಿತಿ ಕೇಳಿದಾಗ ಲಿಂಕ್ ಕಳುಹಿಸಿಕೊಟ್ಟಿದ್ದ. ಅದರ ಮೂಲಕ ಆ್ಯಪ್‌ನಲ್ಲಿ ಹಣ ತೊಡಗಿಸುವಂತೆ ಸೂಚಿ ಸಿದ್ದ. ಅದರಂತೆ ಲಿಂಕ್ ಮೂಲಕ ಕಂಪೆನಿಯೊಂದರ ಆ್ಯಪ್ ತೆರೆದುಕೊಂಡಿದ್ದು, ಬಳಿಕ ಐಪಿಒ ಷೇರು ಲಭಿಸಿತ್ತು. ಅದನ್ನು ಖರೀದಿಸಿದರೆ ಹೆಚ್ಚಿನ ಲಾಭಾಂಶ ದೊರೆಯುವುದು ಎಂದು ಅಪರಿಚಿತ ವ್ಯಕ್ತಿಗಳು ಹೇಳಿದಂತೆ ತಾನು ಜು.28ರಿಂದ ಆ.21ರವರೆಗೆ ತನ್ನ ಮತ್ತು ಮಗಳ ಖಾತೆಯಿಂದ ಒಟ್ಟು 34,15,100 ರೂ. ಹೂಡಿಕೆ ಮಾಡಿದ್ದೆ. ಬಳಿಕ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ನೋಡಿದಾಗ ಸಾಧ್ಯವಾಗಿಲ್ಲ. ಈ ಬಗ್ಗೆ ವಿಚಾರಿಸಿದಾಗ ಇನ್ನೂ ಹೆಚ್ಚಿನ ಹಣ ತೊಡಗಿಸುವಂತೆ ಒತ್ತಾಯಿಸಿದ್ದಾರೆ. ಹೂಡಿಕೆ ಮಾಡದಿದ್ದರೆ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಬಗ್ಗೆ ಅನುಮಾನ ಬಂದು ಪರಿಶೀಲಿಸಿದಾಗ ತಾನು ಮೋಸಹೋಗಿರುವುದು ತಿಳಿದು ಬಂದಿದೆ ಎಂದು ಮಂಗಳೂರು ಸೆನ್ ಠಾಣೆಗೆ ನೀಡಿದ ದೂರಿನಲ್ಲಿ 73ರ ಹರೆಯದ ವ್ಯಕ್ತಿ ತಿಳಿಸಿದ್ದಾರೆ.





