ಕಮ್ಯುನಿಟಿ ಸೆಂಟರ್ ಮೂಲಕ ಸಮುದಾಯದ ಸೇವೆಗೆ ಒತ್ತು: ಝಕರಿಯಾ
ಹಿದಾಯ ಫೌಂಡೇಷನ್ ಗ್ಲೋಬಲ್ ಮೀಟ್-2025

ಮಂಗಳೂರು: ಸಮುದಾಯದ ಶಿಕ್ಷಣ, ಆರೋಗ್ಯವನ್ನು ಒಳಗೊಂಡಂತೆ ಕೌನ್ಸಿಲಿಂಗ್ ಸೆಂಟರ್, ಕೌಶಲ್ಯ ತರಬೇತಿ ಮೊದಲಾದ ಯೋಜನೆಯೊಂದಿಗೆ ಎಲ್ಲಾ ರೀತಿಯ ತುಡಿತ, ಮಿಡಿತಗಳಿಗೆ ಸ್ಪಂದಿಸುವ ನಿಟ್ಟಿ ನಲ್ಲಿ ಮಂಗಳೂರು ಹೃದಯ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಕಮ್ಯುನಿಟಿ ಸೆಂಟರ್ (ಇಪಿಸೆಂಟರ್) ಕಾಮಗಾರಿ ಪ್ರಗತಿಯಲ್ಲಿ ಸಾಗುತ್ತಿದ್ದು, ಡಿಸೆಂಬರ್ ತಿಂಗಳಲ್ಲಿ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆ ಆಗಲಿದೆ ಎಂದು ಹಿದಾಯ ಫೌಂಡೇಷನ್ ಟ್ರಸ್ಟ್ ಚೇರ್ಮನ್ ಝಕರಿಯಾ ಬಜ್ಪೆ ಹೇಳಿದರು.
ಅವರು ಜು. 22ರಂದು ಮಂಗಳೂರುನಲ್ಲಿ ಹಿದಾಯ ಫೌಂಡೇಷನ್ ಕೇಂದ್ರ ಕಚೇರಿಯಲ್ಲಿ ಹಿದಾಯ ಫೌಂಡೇಷನ್ ಗ್ಲೋಬಲ್ ಮೀಟ್ ಸಮಾರಂಭದಲ್ಲಿ ಮಾತನಾಡಿ, ಕಮ್ಯುನಿಟಿ ಸೆಂಟರ್ ಒಟ್ಟು30 ಕೋಟಿ ರೂಪಾಯಿ ಯೋಜನೆಯಾಗಿದ್ದು, ಅನಿವಾಸಿ ಭಾರತೀಯ ಸಮಿತಿ ಮತ್ತು ಕೇಂದ್ರ ಸಮಿತಿಯವರ ಅವಿರತ ಶ್ರಮದಿಂದಾಗಿ ಮೊದಲ ಹಂತದ ಮೊದಲನೇ ಮಹಡಿ ಕಾಮಗಾರಿ ಕೊನೆ ಹಂತದಲ್ಲಿದೆ, ಮುಂದಿನ ಹಂತದ ಅಭಿವೃದ್ಧಿ ಕೆಲಸಗಳಿಗೆ ನಾವೆಲ್ಲರೂ ಸಹಭಾಗಿಗಳಾಗಬೇಕು, ಆ ಮೂಲಕ ಅಲ್ಲಾಹುವಿನ ಇಷ್ಟಾರ್ಥ ಕೆಲಸಗಳಿಗೆ ನಾವುಗಳು ಕೈಜೋಡಿಸಬೇಕು ಎಂದರು.
ಬಂದರು ಮಸೀದಿಯ ಖತೀಬ್ ಸುಹೈಬ್ ಹುಸೈನ್ ಮೌಲಾನಾ ಮಾತನಾಡಿ ಕಳೆದ 18 ವರ್ಷಗಳಿಂದ ನಿಶ್ವಾರ್ಥವಾಗಿ ಬಡವರ, ಅಸಹಾಯಕರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇದರ ಕರ‍್ಯಕರ್ತರು ನಿಜವಾದ ಸೇವಾಕರ್ತರು, ಸಂಸ್ಥೆ ಹಾಕಿಕೊಂಡಿರುವ ಯೋಜನಾಬದ್ಧ ಕರ‍್ಯಕ್ರಮ ಯಶಸ್ವಿಯಾಗಲಿ ಎಂದರು.
ಹಿದಾಯ ಫೌಂಡೇಷನ್ ಅಧ್ಯಕ್ಷ ಹನೀಫ್ ಹಾಜಿ ಮಾತನಾಡಿ ಸಂಸ್ಥೆಯ ವತಿಯಿಂದ ಕಾವಲ್‌ಕಟ್ಟೆಯಲ್ಲಿ ರುವ ಹಿದಾಯ ಶೇರ್ ಮತ್ತು ಕೇರ್ ಕಾಲನಿಯಲ್ಲಿ 47 ಮನೆಗಳನ್ನು ನಿರ್ಮಿಸಿದ್ದು, ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳು ವಾಸಿಸುತ್ತಿದ್ದು, ಇವರುಗಳ ಆಹಾರ, ಇಲ್ಲಿನ 60 ಮಕ್ಕಳ ಶಿಕ್ಷಣ ವ್ಯವಸ್ಥೆಯನ್ನು ಸಂಸ್ಥೆ ನೋಡಿಕೊಳ್ಳುತ್ತಿದೆ. ಅದಾಗ್ಯೂ ಜಿಲ್ಲೆಯಿಂದ ಆಯ್ದ 48ಕುಟುಂಬಗಳಿಗೆ ಪಡಿತರ ವ್ಯವಸ್ಥೆಯನ್ನು ಮಾಡಲಾಗುತ್ತಿದೆ, ಪ್ರಸಕ್ತ ಸಾಲಿನಲ್ಲಿ ಯೆನ್ ಕಾರ್ಡು ಮೂಲಕ 1100 ರೋಗಿಗಳಿಗೆ 10ಲಕ್ಷದ35 ಸಾವಿರ ರೂಪಾಯಿಯನ್ನು ಸಂಸ್ಥೆ ಭರಿಸಿದೆ ಎಂದು ತಿಳಿಸಿದರು.
ಸಂಸ್ಥೆಯ ಸ್ಥಾಪಕಾಧ್ಯಕ್ಷ ಕಾಸಿಂ ಅಹಮದ್, ಕಾರ್ಯದರ್ಶಿ ಅಬ್ಬಾಸ್ ಉಚ್ಚಿಲ್, ವೆಲ್‌ನೆಸ್‌ನ ಝಿಯಾದ್, ಯುವ ಘಟಕದ ಇಬ್ರಾಹಿಂ ಖಲೀಲ್, ಮಹಿಳಾ ಘಟಕದ ನೌಶೀನ, ಆಡಳಿತಾಧಿಕಾರಿ ಆಬಿದ್ ಅಸ್ಗರ್, ಡಾ. ಹಬೀಬ್ ರಹಿಮಾನ್, ಮಾತನಾಡಿದರು.
ಅನಿವಾಸಿ ಭಾರತೀಯರ ರಿಯಾದ್ ಘಟಕದ ಮಹಮ್ಮದ್ ಮತೀಮ್, ದಮ್ಮಾಮ್ ಘಟಕದ ಬಾವಾ ಸಾಬ್, ಅಝೀಝ್, ಜೆದ್ದಾ ಘಟಕದ ಹಮೀದ್ ಮಠ, ಜುಬೈಲ್ ಘಟಕದ ಫಾರೂಕ್, ದುಬೈ ಘಟಕದ ಮಹಮ್ಮದ್ ಆಶಿಫ್ ತಮ್ಮ ಘಟಕಗಳ ಕರ್ಯ ಚಟುವಟಿಕೆಗಳ ಮಾಹಿತಿ ನೀಡಿ ಮಾತನಾಡಿದರು.
ಸಂಸ್ಥೆಯ ಪದಾಧಿಕಾರಿಗಳಾದ ರಿಯಾಝ್ ಬಾವ, ಎಫ್.ಎಂ. ಬಶೀರ್, ಮಕ್ಬೂಲ್ ಅಹಮದ್, ಆಶಿಫ್ ಇಕ್ಬಾಲ್, ಅಬ್ದುಲ್ ಹಕೀಂ, ಶುಕೂರ್ ಹಾಜಿ ಕಲ್ಲೇಗ, ಇಸ್ಮಾಯಿಲ್ ನೆಲ್ಯಾಡಿ, ಇದ್ದಿನ್ ಕುಂಞ್, ಶೇಖ್ ಇಸಾಕ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಸ್ವಾಗತಿಸಿ, ಆಶಿಕ್ ಕುಕ್ಕಾಜೆ ವಂದಿಸಿದರು. ಮಹಮ್ಮದ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.







