ಪಕ್ಷ ಸಂಘಟನೆಗಾಗಿ ನಾಯಕತ್ವ ಬದಲಾವಣೆಗೆ ಒತ್ತು; ಒಂದೂವರೆ ತಿಂಗಳಲ್ಲಿ ಅನುಷ್ಠಾನ: ಕೆಪಿಸಿಸಿ ಕಾರ್ಯಾಧ್ಯಕ್ಷರು

ಮಂಗಳೂರು: ಕಾಂಗ್ರೆಸ್ ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಬ್ಲಾಕ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಅಗತ್ಯ ಇರುವಲ್ಲಿ ಅಧ್ಯಕ್ಷರ ಬದಲಾವಣೆಯೊಂದಿಗೆ ಪಕ್ಷ ಸಂಘಟನೆ ಮಾಡಲಾಗುವುದು. ಮುಂದಿನ ಒಂದೂವರೆ ತಿಂಗಳಲ್ಲಿ ಈ ಬದಲಾವಣೆ ಅನುಷ್ಟಾನವಾಗಲಿದ್ದು, ಸದ್ಯ ಪಕ್ಷ ಕ್ಷೀಣವಾಗಿರುವ ದ.ಕ. ಜಿಲ್ಲೆಯಿಂದಲೇ ಈ ಕಾರ್ಯವನ್ನು ಆರಂಭಿಸುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಘೋಷಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ್, ಮಂಜುನಾಥ್ ಭಂಡಾರಿ ಹಾಗೂ ವಸಂತ ಕುಮಾರ್ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು.
ಮುಂಬರುವ ಸ್ಥಳೀಯಾಡಳಿತ ಹಾಗೂ ಎಂಎಲ್‌ಸಿ ಉಪ ಚುನಾವಣೆ ಸೇರಿದಂತೆ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವ ನಿಟ್ಟಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಬ್ಲಾಕ್ ಮಟ್ಟದ ಅಧ್ಯಕ್ಷರ ಬದಲಾವಣೆ ಕಾರ್ಯಕ್ಕೆ ಮುಂದಾಗಿ ದ್ದೇವೆ. ದ.ಕ. ಜಿಲ್ಲೆಯಲ್ಲಿ ಪಕ್ಷದ ಗತವೈಭವವನ್ನು ಮತ್ತೆ ಮೇಲೆತ್ತಲು ಮುಂದಿನ ದಿನಗಳಲ್ಲಿ ಹೊಸಶೈಲಿಯಲ್ಲಿ ಪಕ್ಷವನ್ನು ಪುನರ್ ಸಂಘಟಿಸಲು ಕಾರ್ಯತಂತ್ರಗಳೊಂದಿಗೆ ನಾವು ಮುಂದಾಗಿದ್ದೇವೆ. ಈ ಬಗ್ಗೆ ಸ್ಥಳೀಯ ನಾಯಕರ ಜತೆ ಮಾತುಕತೆ ನಡೆಸಲಾಗಿದೆ ಎಂದು ಜಿ.ಸಿ. ಚಂದ್ರಶೇಖರ್ ತಿಳಿಸಿದರು.
ಕಳೆದ 10 ವರ್ಷಗಳಿಂದ ಜಿಲ್ಲೆಯಲ್ಲಿ ಬಿಜೆಪಿಯ ಸಂಸದರು, ಶಾಸಕರಿದ್ದರೂ ಗುರುತರ ಯೋಜನೆ ಮಂಗಳೂರಿಗೆ ಬಂದಿಲ್ಲ. ಆದರೂ ಅವರಿಗೆ ಮತ ಹಾಕುವ ಪರಿಸ್ಥತಿ ಇಲ್ಲಿ ನಿರ್ಮಾಣ ಆಗಿದೆ. ರಾಜಕೀಯ ಚುನಾವಣೆಯ ಸಂದರ್ಭ ಮಾತ್ರವೇ ಇರಬೇಕು ಹೊರತು, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ನುಸುಳಬಾರದು. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ರಸ್ತೆಗಳು ಅರ್ದಂಬರ್ಧವಾಗಿ ನೆನೆಗುದಿಗೆ ಬಿದ್ದಿವೆ. ಪ್ರತ್ಯೇಕ ರೈಲ್ವೇ ವಿಭಾಗದ ಕೂಗಿಗೆ ಮನ್ನಣೆ ದೊರಕಿಲ್ಲ. ಸರಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ದೊರಕುತ್ತಿಲ್ಲ. ಮಂಗಳೂರಿನ ಹಿತದೃಷ್ಟಿಯಿಂದ ಹೊಸ ರೀತಿಯ ರಾಜಕೀಯ ಆರಂಭಿಸಬೇಕಾಗಿದೆ. ಚುನಾವಣೆ ಸಂದರ್ಭ ಆರೋಪ, ಪ್ರತ್ಯಾರೋಪ ಇರಲಿ. ಆದರೆ, ಉಳಿದ ಸಂದರ್ಭ ರಾಜಕೀಯ ಮರೆತು ಕ್ಷೆತ್ರದ ಅಭಿವೃದ್ಧಿಗೆ ಪೂರಕವಾಗಿ ದೂರದೃಷ್ಟಿಯ ರಾಜಕಾರಣ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕೆಪಿಸಿಸಿ ಮಟ್ಟದಲ್ಲಿ ಡಾ. ಪರಮೇಶ್ವರ್ ನೇತೃತ್ವದ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಪ್ರಾತಿ ನಿಧ್ಯ ಸಿಗದ ಸಮುದಾಯಗಳಿಗೆ ಒತ್ತು ನೀಡಿ ಸದಸ್ಯರನ್ನು ಆಯ್ಕೆ ಮಾಡಲು ಕ್ರಮ ವಹಿಸಲಾಗಿದೆ. ಮೂರ್ನಾಲ್ಕು ಸಭೆ ಗಳನ್ನು ನಡೆಸಲಾಗಿದ್ದು, ಯಾವ ಸಮುದಾಯಕ್ಕೆ ಈವರೆಗೂ ಎಂಎಲ್ಸಿ, ಎಂಎಲ್‌ಎ ಪ್ರಾತಿನಿಧ್ಯ ನೀಡಲಾಗಿಲ್ಲವೋ ಅಂತಹರನ್ನು ಹುಡುಕಿ ಸದಸ್ಯರನ್ನು ಆಯ್ಕೆ ಮಾಡಲಾಗುವುದು. 224 ವಿಧಾನಸಭಾ ಕ್ಷೇತ್ರಗಳಲ್ಲೂ ತಲಾ ಒಬ್ಬ ಮಹಿಳಾ ಪ್ರಾತಿನಿಧ್ಯ ಕಡ್ಡಾಯವಾಗಿರುವಂತೆ ತೀರ್ಮಾನ ಮಾಡಲಾಗಿದೆ. ಶೇ. 80ರಷ್ಟು ಈ ಕಾರ್ಯ ನಡೆದಿದೆ ಎಂದು ಅವರು ಹೇಳಿದರು.
ವಸಂತ ಕುಮಾರ್ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಪಕ್ಷವನ್ನು ತಳಮಟ್ಟದಿಂದ ಮೇಲೆತ್ತಬೇಕಾಗಿದೆ. ಬಿಜೆಪಿ ಒಡೆದು ಆಳುವ ನೀತಿಯಿಂದ ದಕ್ಷಿಣ ಭಾರತದ ಮಲೆನಾಡು, ಕರವಳಿಯಲ್ಲಿ ಪಾಬಲ್ಯ ಪಡೆದಿದೆ. ಬಿಜೆಪಿ ಮತ್ತು ಅವರ ಧೋರಣೆ ಯನ್ನು ಎದುರಿಸಿ ಪಕ್ಷವನ್ನು ಮೇಲೆತ್ತಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ನಮ್ಮದೇ ಆದಕಾರ್ಯತಂತ್ರ ರೂಪಿಸಿದ್ದೇವೆ ಎಂದರು.
ಮಂಜುನಾಥ ಭಂಡಾರಿ ಮಾತನಾಡಿ, ಎಲ್ಲಾ ಜಿಲ್ಲೆಗಳಿಗೂ ಐದು ಮಂದಿ ಕಾರ್ಯಾಧ್ಯಕ್ಷರು ಭೇಟಿ ನೀಡಿ ಪಕ್ಷ ಸಂಘಟನೆಗೆ ನಿರ್ಧರಿಸಲಾಗಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಎಂಎಲ್ಸಿ ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಲ್ಲಿ ಬ್ಲಾಕ್, ಮುಂಚೂಣಿ ಘಟಕದ ಅಧ್ಯಕ್ಷರು, ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು, ಮುಖಂಡರನ್ನು ಒಗ್ಗೂಡಿಸಿ ಸಭೆ ನಡೆಸಲಾಗು ವುದು ಎಂದರು.
ಮುಂಬರುವ ಚುನಾವಣೆಗಳಲ್ಲಿ ಮೂಡ, ವಾಲ್ಮೀಕಿ ಹಗರಣಗಳು ಪಕ್ಷಕ್ಕೆ ಹಿನ್ನಡೆ ಆಗಲಿವೆಯೇ ಎಂಬಸುದ್ದಿಗಾರರ ಪ್ರಶ್ನೆಗೆ, ಹಗರಣಗಳ ಆರೋಪ ನಿರಂತರವಾಗಿ ನಡೆಯುತ್ತಿರುತ್ತದೆ. ಅದರಿಂದ ಪರಿಣಾಮ ಬೀರದು ಎಂದು ಹೇಳಲಾಗದು. ಆದರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಮೇಲೆ ಪರಿಣಾವಾಗದು. ಚುನಾವಣೆಯಲ್ಲಿ ಸೋಲು ಗೆಲುವು ಸ್ವಾಭಾವಿಕ. ಆದರೆ ಪಕ್ಷಕ್ಕೆ ಅದು ಮಾನದಂಡ ಆಗಬಾರದು. ಪಕ್ಷಕ್ಕೆ ಅದರದ್ದೇ ಆದ ಇತಿಹಾಸ ಇದೆ ಎಂದು ಚಂದ್ರಶೇಖರ್ ಹೇಳಿದರು.
ಬಿಜೆಪಿಯವರ ಹಿಂದಿನ ಪಾದಯಾತ್ರೆ ವಿಫಲವಾಗಿದೆ. ಅವರೊಳಗೆ ನಾಲ್ಕೈದು ಗುಂಪುಗಳು. ಅವರ ಪಕ್ಷದ ಯತ್ನಾಳ್ ಕೇಳುವ ಪ್ರಶ್ನೆಗೆ ಪಕ್ಷದ ರಾಜ್ಯಾಧ್ಯಕ್ಷರು ಉತ್ತರಿಸಲಿ ಎಂದು ಪ್ರತಿಕ್ರಿಯಿಸಿದರು.
ಕರಾವಳಿಲ್ಲಿ ಜಿಲ್ಲಾಧ್ಯಕ್ಷರು ಬದಲಾವಣೆ ಆಗಲಿದ್ದಾರೆಯೇ ಎಂಬ ಪ್ರಶ್ನೆಗೆ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅಗತ್ಯ ಇರುವಲ್ಲಿ ಬದಲಾವಣೆಗೆ ಕ್ರಮ ಆಗಲಿದೆ ಎಂದು ಚಂದ್ರಶೇಖರ್ ಪ್ರತಿಕ್ರಿಯಿಸಿದರು. ಗೋಷ್ಟಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಳಾದ ವಿಜಯ ಮುಳುಗುಂದ, ಬಾಲರಾಜ್, ಸತ್ಯನಾರಾಯಣ, ಇನಾಯತ್ ಅಲಿ, ಎಂ.ಎಸ್. ಮುಹಮ್ಮದ್, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.







