ಲೇಬರ್ ಕೋಡ್ ಹೆಸರಿನಲ್ಲಿ ಕಾರ್ಪೊರೇಟ್ ಕೋಡ್ ಜಾರಿ: ಸುನಿಲ್ ಕುಮಾರ್ ಬಜಾಲ್

ಮಂಗಳೂರು, ಜ.28: ಕೇಂದ್ರ ಸರಕಾರವು ಬಂಡವಾಳ ಶಾಹಿಗಳ ಹಿತಾಸಕ್ತಿಗಳನ್ನು ಕಾಪಾಡಲು ದೇಶದ ಪ್ರಮುಖ 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ ಕಾರ್ಪೊರೇಟ್ ಪರವಾದ 4 ಸಂಹಿತೆಗಳನ್ನು ರೂಪಿಸಿ ತಕ್ಷಣ ದಿಂದಲೇ ಜಾರಿಯಾಗುವಂತೆ ಏಕಪಕ್ಷೀಯ ತೀರ್ಮಾನವನ್ನು ಕೈಗೊಂಡಿದೆ. ಇದು ಕೇವಲ ಲೇಬರ್ ಕೋಡ್ ಅಲ್ಲ ಬದಲಾಗಿ ಕಾರ್ಪೊರೇಟ್ ಕೋಡ್ ಆಗಿದೆ ಎಂದು ಸಿಐಟಿಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕ ಸಂಹಿತೆಗಳ ವಿರುದ್ದ ಫೆ.12 ರಂದು ನಡೆಯಲಿರುವ ಆಖಿಲ ಭಾರತ ಮಹಾಮುಷ್ಕರದ ಪ್ರಚಾರಾರ್ಥ ವಾಗಿ ಮುಲ್ಕಿಯಿಂದ ಪ್ರಾರಂಭಗೊಂಡ ಪಾದಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ರೈತ ವಿರೋಧಿ ಬೀಜ ಮಸೂದೆ ಹಾಗೂ ವಿದ್ಯುತ್ ಮಸೂದೆಯನ್ನು ಜಾರಿಗೊಳಿಸಲು ಹುನ್ನಾರ ನಡೆಸುತ್ತಿರುವ ಕೇಂದ್ರ ಸರಕಾರವು ಎಲ್ಲಾ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುವ ಮೂಲಕ ಇಡೀ ದೇಶವನ್ನೇ ಕಾರ್ಪೊರೇಟ್ ಕಂಪೆನಿಗಳ ಪಾದತಲಕ್ಕೆ ಒಪ್ಪಿಸಲು ಸನ್ನದ್ದವಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ನಾಯಕ ಯೋಗೀಶ್ ಜಪ್ಪಿನಮೊಗರು ಮಾತನಾಡಿ ಗ್ರಾಮೀಣ ಜನತೆಯ ಬದುಕಿಗೆ ಪೂರಕವಾಗಿದ್ದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಿದ್ದುಪಡಿ ತರುವ ಮೂಲಕ ಸರ್ವನಾಶ ಮಾಡಲು ಹೊರಟಿದೆ ಎಂದು ದೂರಿದರು
ಪಾದಯಾತ್ರೆಯ ಉದ್ಘಾಟಕ ಸುನಿಲ್ ಕುಮಾರ್ ಬಜಾಲ್ ಕೆಂಬಾವುಟವನ್ನು ಜಾಥಾ ತಂಡದ ನಾಯಕರಾದ ಬಿ.ಕೆ ಇಮ್ತಿಯಾಜ್ ಹಾಗೂ ಉಪನಾಯಕರಾದ ಜಯಲಕ್ಷ್ಮಿ , ರವಿಚಂದ್ರ ಕೊಂಚಾಡಿ, ಶ್ರೀನಾಥ ಕಾಟಿಪಳ್ಳ, ತಯ್ಯುಬ್ ಬೆಂಗರೆ, ಪ್ರಮೀಳಾ ಶಕ್ತಿನಗರ, ಸಾಧಿಕ್ ಮುಲ್ಕಿಯವರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಜನಪರ ಹೋರಾಟಗಾರರಾದ ಮುನೀರ್ ಕಾಟಿಪಳ್ಳ, ಪ್ರಗತಿಪರ ಚಿಂತಕರಾದ ಡಾ.ಕೃಷ್ಣಪ್ಪ ಕೊಂಚಾಡಿ, ವಿಮಾ ಪ್ರತಿನಿಧಿ ಸಂಘಟನೆಯ ಜಿಲ್ಲಾ ನಾಯಕರಾದ ರಾಜನ್ ಡಿ ಕೋಸ್ತಾ, ಸಿಐಟಿಯು ಜಿಲ್ಲಾ ನಾಯಕರಾದ ಜಯಂತಿ ಶೆಟ್ಟಿ, ದಿನೇಶ್ ಶೆಟ್ಟಿ,ಸಂತೋಷ್ ಆರ್.ಎಸ್, ಅಶೋಕ್ ಶ್ರೀಯಾನ್,ನಾಗೇಶ್ ಕೋಟ್ಯಾನ್,ಯುವಜನ ನಾಯಕರಾದ ನವೀನ್ ಕೊಂಚಾಡಿ, ಜಗದೀಶ್ ಬಜಾಲ್, ಆದಿವಾಸಿ ಸಂಘಟನೆಯ ಜಿಲ್ಲಾ ನಾಯಕರಾದ ಕರಿಯ ಕೆ, ಶೇಖರ್ ವಾಮಂಜೂರು, ಕೃಷ್ಣ ಇನ್ನಾ,ದಲಿತ ಸಂಘಟನೆಯ ಮುಖಂಡರಾದ ಕೃಷ್ಣ ತಣ್ಣೀರುಬಾವಿ, ಮಹಿಳಾ ಮುಖಂಡರಾದ ಅಸುಂತ ಡಿ ಸೋಜ, ಯೋಗಿತಾ,ರೋಹಿಣಿ, ಮುಂತಾದವರು ಉಪಸ್ಥಿತರಿದ್ದರು.
ನೂರಕ್ಕೂ ಮಿಕ್ಕಿದ ಕಾರ್ಯಕರ್ತರು ಕೇಂದ್ರ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಾಗಿದರು.







