ಸಂತ ಅಲೋಶಿಯಸ್ ವಿವಿಯಲ್ಲಿ ಪ್ರಸಕ್ತ ಸಾಲಿನಿಂದ ಇಂಜಿನಿಯರಿಂಗ್ ಶಿಕ್ಷಣ

ಮಂಗಳೂರು, ಮೇ 12: ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯವು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ)ಯ ಅನುಮೋದನೆಯೊಂದಿಗೆ 2025-26ನೆ ಸಾಲಿನ ಶೈಕ್ಷಣಿಕ ವರ್ಷದಿಂದ ನಾಲ್ಕು ಇಂಜಿನಿಯರಿಂಗ್ ಕೋರ್ಸ್ಗಳನ್ನು ಆರಂಭಿಸಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ರೆ. ಡಾ.ಪ್ರವೀಣ್ ಮಾರ್ಟಿಸ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಯಾಂತ್ರಿಕ ಬುದ್ಧಿಮತ್ತೆ ಮತ್ತು ಯಂತ್ರಾಭ್ಯಾಸ, ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್, ಇಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್ ವಿಭಾಗಗಳಲ್ಲಿ ಕೋರ್ಸ್ ಗಳು ಆರಂಭವಾಗಲಿವೆ ಎಂದು ಹೇಳಿದರು.
ವಿಶ್ವವಿದ್ಯಾನಿಲಯದ ಸೆಂಟೆನರಿ ಮೈದಾನದಲ್ಲಿ ಹೊಸತಾಗಿ ನಿರ್ಮಾಣಗೊಳ್ಳುತ್ತಿರುವ ಆಧುನಿಕ ಕಟ್ಟಡದಲ್ಲಿ ಈ ಇಂಜಿನಿಯರಿಂಗ್ ತರಗತಿಗಳು ಪ್ರತೀ ವಿಭಾಗದಲ್ಲಿ ತಲಾ 60 ವಿದ್ಯಾರ್ಥಿಗಳೊಂದಿಗೆ ಆರಂಭಗೊಳ್ಳಲಿದೆ. ಕೋರ್ಸ್ ಗಳಿಗೆ ಅಗತ್ಯವಾದ ಹೈಟೆಕ್ ಮಾದರಿಯ ಸ್ಮಾರ್ಟ್ ತರಗತಿಗಳು, ವಿನೂತನ ಬಗೆಯ ಅತ್ಯಾಧುನಿಕ ಪ್ರಯೋಗ ಶಾಲೆಗಳು, ಸಂಶೋಧನಾ ಕೇಂದ್ರಗಳು ಇರಲಿವೆ. ಕೋರ್ಸ್ ಗಳ ಆರಂಭದಲ್ಲಿಯೇ ವಿದ್ಯಾರ್ಥಿಗಳಿಗೆ ಪ್ರಮುಖ ಕೈಗಾರಿಕಾ ಸಂಸ್ಥೆಗಳ ಸಹಕಾರದೊಂದಿಗೆ ಶಿಕ್ಷಣ ಒದಗಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಇನ್ಫೋಸಿಸ್, ವಿಪ್ರೋ ಹಾಗೂ ಇತರ ಐಟಿ ಸಂಸ್ಥೆಗಳ ಜೊತೆ ಮಾತುಕತೆ ನಡೆದಿದ್ದು, ವಿದ್ಯಾರ್ಥಿಗಳಿಗೆ ವಿದೇಶಗಳಲ್ಲಿ ಮುಂದಿನ ಉದ್ಯೋಗಾವಕಾಶಕ್ಕೆ ಪೂರಕವಾಗಿ ಜಪಾನ್, ಜರ್ಮನಿ ಸೇರಿದಂತೆ ಇತರ ಭಾಷಾ ಕೋರ್ಸ್ ಗಳನ್ನು ಕೂಡಾ ಆರಂಭಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಇತ್ತೀಚೆಗೆ ನ್ಯಾಕ್ ವೌಲ್ಯಮಾಪನದಲ್ಲಿ ಅತ್ಯುನ್ನತ ಗ್ರೇಡ್ ಎ++ ಅನ್ನು ಪಡೆದಿದೆ. ಇದೀಗ ಇಂಜಿನಿಯರಿಂಗ್ ಶಿಕ್ಷಣದ ಮೂಲಕ ಸಂಸ್ಥೆಯು ಶೈಕ್ಷಣಿಕ ಪರಂಪರೆ ಮತ್ತಷ್ಟು ವ್ಯಾಪಕಗೊಳ್ಳಲಿದೆ.
ಅರ್ಹ ವಿದ್ಯಾರ್ಥಿಗಳು ಪ್ರವೇಶಕ್ಕೆ www.staloysius.edu.in ವೆಬ್ ಸೈಟ್ ನಲ್ಲಿ ನೋಂದಣಿ ಮಾಡಬಹುದು. ಸಂಸ್ಥೆಯ ಪ್ರವೇಶ ಪರೀಕ್ಷೆಯೊಂದಿಗೆ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ನಡೆಯಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಡೀನ್ ಗಳಾದ ಆಲ್ವಿನ್ ಡೇಸಾ, ರೂಬನ್, ರೊನಾಲ್ಡ್ ನಝರೆತ್ ಉಪಸ್ಥಿತರಿದ್ದರು.







