ಆದಾಯ ಪ್ರಮಾಣ ಪತ್ರದಲ್ಲಿ ಹೆಚ್ಚಿನ ಮೊತ್ತ ನಮೂದು: ಗ್ರಾಮಕರಣಿಕರ ವಿರುದ್ಧ ದಲಿತ ಮುಖಂಡರ ಆರೋಪ
ಎಸ್ಸಿ-ಎಸ್ಟಿ ಮಾಸಿಕ ಸಭೆ

ಮಂಗಳೂರು, ಅ.22: ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ಗೆ ವಾರ್ಷಿಕ ಆದಾಯದ ಮಿತಿ 45 ಸಾವಿರ ರೂ.ಆಗಿದೆ. ಆದರೆ ಕೆಲವು ಗ್ರಾಮಕರಣಿಕರು ಆದಾಯ ಪ್ರಮಾಣಪತ್ರದಲ್ಲಿ ಹೆಚ್ಚಿನ ಮೊತ್ತ ನಮೂದಿಸುತ್ತಿರುವುದರಿಂದ ಅರ್ಜಿಗಳು ಸ್ವೀಕಾರವಾಗುತ್ತಿಲ್ಲ. ಇದರಿಂದ ಅನೇಕ ಅರ್ಹ ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ನಿಂದ ವಂಚಿತರಾಗುತ್ತಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅಧ್ಯಕ್ಷತೆಯಲ್ಲಿ ಆಯುಕ್ತರ ಕಚೇರಿಯಲ್ಲಿ ರವಿವಾರ ನಡೆದ ಎಸ್ಸಿ-ಎಸ್ಟಿ ಕುಂದು ಕೊರತೆಯ ಮಾಸಿಕ ಸಭೆಯಲ್ಲಿ ಈ ಆರೋಪ ಕೇಳಿ ಬಂದಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಿಗುತ್ತಿಲ್ಲ. ಹಾಸ್ಟೆಲ್‌ಗಳಲ್ಲೂ ಸಾಕಷ್ಟು ವಿದ್ಯಾರ್ಥಿ ಗಳಿಗೆ ಸೀಟ್ ಸಿಗುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಸೀಟ್ ಸಿಗದೆ ಪಿಜಿಗಳಲ್ಲಿ ದುಬಾರಿ ಹಣ ಕೊಟ್ಟು ಉಳಿದುಕೊಳ್ಳುವಂತಾಗಿದೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಹಾಸ್ಟೆಲ್‌ಗಳ ಸೀಟ್‌ಗಿಂತ ಹೆಚ್ಚು ಅರ್ಜಿಗಳು ಬರುತ್ತಿರುವು ದರಿಂದ ಎಲ್ಲರಿಗೂ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಬಾಡಿಗೆ ಕಟ್ಟಡದ ಬಗ್ಗೆ ಗಮನ ಹರಿಸಲಾಗುವುದು ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಕಳುಹಿಸಲಾಗುವ ಕವಿತೆಗಳಲ್ಲಿ ಕೊರಗಜ್ಜನನ್ನು ಉಲ್ಲೇಖಿಸುವಾಗ ದಲಿತ ನಿಂದನೆಯ ಆಕ್ಷೇಪಾರ್ಹ ಪದಗಳನ್ನು ಬಳಸುತ್ತಿರುವುದು ಕಂಡುಬರುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅಮಲಾ ಜ್ಯೋತಿ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಈ ಸಮಸ್ಯೆಯನ್ನು ಈಗಾಗಲೇ ಜಿಲ್ಲಾಧಿಕಾರಿಯ ಗಮನಕ್ಕೆ ತರಲಾಗಿದೆ. ಡಿಸಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಎಸ್ಸಿ-ಎಸ್ಟಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಫೇಸ್‌ಬುಕ್ ಖಾತೆಯಲ್ಲಿ ಎಸ್ಸಿ/ಎಸ್ಟಿ ಸಮುದಾಯನ್ನು ಗುರಿಯಾಗಿಸಿಕೊಂಡು ಕೆಲವರು ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದಾರೆ. ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ಸದಾಶಿವ ಉರ್ವ ಸ್ಟೋರ್ ಆಗ್ರಹಿಸಿದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದರು.
ನವರಾತ್ರಿಯ ವೇಳೆ ವಿವಿಧ ವೇಷಗಳನ್ನು ಧರಿಸಿ ಮನೆಗಳಿಗೆ ತೆರಳಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದಲಿತ ಮುಖಂಡ ಗಿರೀಶ್ ಕುಮಾರ್ ಆರೋಪಿಸಿದರು.
ಗಂಜಿಮಠದ ಅಂಬೇಡ್ಕರ್ ಭವನದಲ್ಲಿ ಪೀಠೋಪಕರಣ ಕಳ್ಳತನವಾಗಿದೆ ಎಂದು ದಲಿತ ನಾಯಕ ಎಸ್.ಪಿ. ಆನಂದ ಸಭೆಯ ಗಮನ ಸೆಳೆದರಿ. ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್ ಅನುಪಮ್ ಅಗರ್ವಾಲ್ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ, ಭವನದ ದುರಸ್ತಿಗೆ ಸಂಬಂಧಪಟ್ಟ ಗ್ರಾಪಂಗೆ ಸೂಚಿಸುವಂತೆ ಸಲಹೆ ನೀಡಿದರು.
ಗಸ್ತು ನಿರತ ಪೊಲೀಸರ ಹೆಸರು, ಸಂಪರ್ಕ ಸಂಖ್ಯೆಯು ಅನೇಕರಿಗೆ ತಿಳಿದಿಲ್ಲ ಎಂಬ ವಿಚಾರ ಸಭೆಯಲ್ಲಿ ಪ್ರಸ್ತಾಪವಾ ಯಿತು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಆಯಾ ಪ್ರದೇಶಗಳ ಬೀಟ್ ಪೊಲೀಸರ ಹೆಸರು ಮತ್ತು ಸಂಪರ್ಕ ವಿವರ ಗಳನ್ನು ಅಲ್ಲಿನ ಪ್ರಮುಖ ಗೋಡೆಗಳ ಮೇಲೆ ಹಾಗೂ ವಿವಿಧ ಸ್ಥಳಗಳಲ್ಲಿ ಪ್ರದರ್ಶಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವೆನ್ಲಾಕ್ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಸಿಬ್ಬಂದಿ ವರ್ಗವು ರೋಗಿಗಳನ್ನು ಕರೆ ತರುವವರನ್ನು ಒಳಗೆ ಬಿಡದೆ ಉಡಾಫೆಯಾಗಿ ವರ್ತಿಸುತ್ತಿದ್ದಾರೆ. ಇತ್ತೀಚೆಗೆ ಆಸಿಫ್ ಆಪತ್ಬಾಂಧವ ಅವರಿಗೂ ಇಂತಹ ಕಹಿ ಅನುಭವವಾಗಿದೆ. ಅವರು ಹಲ್ಲೆ ಮಾಡದಿ ದ್ದರೂ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಜಾತಿ-ಭೇದವಿಲ್ಲದೆ ಸಹಾಯ ಮಾಡುವ ಸಮಾಜ ಸೇವಕರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.
ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಸಿದ್ಧಾರ್ಥ ಗೋಯಲ್ ಮತ್ತು ಡಿಸಿಪಿ (ಅಪರಾಧ ಮತ್ತು ಸಂಚಾರ) ಬಿಪಿ ದಿನೇಶ್ ಕುಮಾರ್ ಸಭೆಯಲ್ಲಿದ್ದರು.







