ಬಂಡವಾಳಶಾಹಿ ವ್ಯವಸ್ಥೆ ನಾಶವಾಗದೆ ಪರಿಸರ ಉಳಿಸಲು ಸಾಧ್ಯವಿಲ್ಲ: ಡಾ. ರಾಜೇಂದ್ರ ಉಡುಪ

ಮಂಗಳೂರು, ಜು.30: ಜಾಗತಿಕ ಮಟ್ಟದಲ್ಲಿ ಪರಿಸರ ಸಮಸ್ಯೆ ತೀರಾ ಉಲ್ಬಣಗೊಂಡಿದೆ. ಪರಿಸರ ನಾಶಕ್ಕೆ ಬಂಡವಾಳಶಾಹಿ ವ್ಯವಸ್ಥೆ ದೊಡ್ಡ ಕೊಡುಗೆ ನೀಡಿದೆ. ಬಂಡವಾಳಶಾಹಿ ವ್ಯವಸ್ಥೆ ನಾಶವಾಗದೆ ಪರಿಸರ ಉಳಿಸಲು ಸಾಧ್ಯವಿಲ್ಲ ಎಂದು ಹಿರಿಯ ಮಾರ್ಕ್ಸ್ ವಾದಿ ಚಿಂತಕರಾದ ಡಾ. ಕೆ. ರಾಜೇಂದ್ರ ಉಡುಪರವರು ಅಭಿಪ್ರಾಯಪಟ್ಟಿದ್ದಾರೆ.
ಇಂದು ಮಂಗಳೂರಿನ ಬೋಳಾರದ ಎಕೆಜಿ ಭವನದಲ್ಲಿ ಜರುಗಿದ ಸಿಪಿಎಂ ದ. ಕ.ಜಿಲ್ಲಾ ಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜಗತ್ತಿಗೆ ದೊಡ್ಡಣ್ಣನೆಂದು ಕರೆಸಿಕೊಳ್ಳುವ ಅಮೆರಿಕ ಯುದ್ಧ ಇಲ್ಲದೆ ಒಂದು ಕ್ಷಣವೂ ಬದುಕುವುದಿಲ್ಲ. ಅಮೆರಿಕದ ಮಿಲಿಟರಿ ವರ್ಷಕ್ಕೆ 2.5 ಬಿಲಿಯನ್ ಟನ್ ತೈಲ ಉಪಯೋಗಿಸುತ್ತಿದೆ. ಒಂದು ಯುದ್ಧ ನೌಕೆ ಗಂಟೆಗೆ ಒಂದೂವರೆ ಲಕ್ಷ ಲೀಟರ್ ತೈಲ ಉಪಯೋಗಿಸಿದರೆ, ಯುದ್ಧ ವಿಮಾನ ಗಂಟೆಗೆ ಅರ್ಧ ಲಕ್ಷ ಲೀಟರ್ ತೈಲ ಉಪಯೋಗಿಸುತ್ತದೆ. ಇವೆಲ್ಲವೂ ಅಸಂಖ್ಯಾತ ಮಟ್ಟದಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಅಮೆರಿಕದ ರಕ್ಷಣಾ ವಿಭಾಗ ವರ್ಷಕ್ಕೆ 5 ಲಕ್ಷ ಟನ್ ವಿಷ ತ್ಯಾಜ್ಯಗಳನ್ನು ಉತ್ಪಾದಿಸುತ್ತದೆ.ಒಟ್ಟಿನಲ್ಲಿ ಅಮೆರಿಕನ್ ಸಾಮ್ರಾಜ್ಯ ಶಾಹಿಗಳಾಗಲೀ, ಬಂಡವಾಳಶಾಹಿ ವ್ಯವಸ್ಥೆಯಾಗಲೀ ನಾಶವಾಗದೆ ಪರಿಸರ ಉಳಿಸಲು ಸಾಧ್ಯವಿಲ್ಲ ಎಂದರು.
ಸಿಪಿಎಂ ಹಿರಿಯ ನಾಯಕರಾದ ಸುಂದರ ಶೆಟ್ಟಿ ಮೂಡಬಿದ್ರಿಯವರು ಕೆಂಬಾವುಟವನ್ನು ಹಾರಿಸುವ ಮೂಲಕ ಚಾಲನೆ ನೀಡಿದರು.
ಪಕ್ಷಕ್ಕೆ ಅಪಾರ ಕೊಡುಗೆ ನೀಡಿದ ಸುಂದರ ಶೆಟ್ಟಿ ಮೂಡಬಿದ್ರಿಯವರನ್ನು ಕಾರ್ಯಕ್ರಮದಲ್ಲಿ ಹೃದಯಪೂರ್ವಕವಾಗಿ ಗೌರವಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿಯವರು ವಹಿಸಿದ್ದರು. ವೇದಿಕೆಯಲ್ಲಿ ಸಿಪಿಎಂ ರಾಜ್ಯ ಸಮಿತಿ ಸದಸ್ಯರಾದ ವಸಂತ ಆಚಾರಿ, ಮುನೀರ್ ಕಾಟಿಪಳ್ಳರವರು ಉಪಸ್ಥಿತರಿದ್ದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ನಿರ್ವಹಿಸಿದರು.