ಆ.27ರಂದು ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯಿಂದ ಪರಿಸರ ಕಾಳಜಿ ಕಾರ್ಯಕ್ರಮ

ಮಂಗಳೂರು, ಆ.24: ಕಳೆದ ಹತ್ತು ವರ್ಷಗಳಿಂದ ರಕ್ತದಾನ ಶಿಬಿರ ಹಾಗೂ ಇತರ ಸಾಮಾಜಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ 400ನೇ ರಕ್ತದಾನ ಶಿಬಿರವು ಆ.25ರಂದು ದುಬೈನಲ್ಲಿ ನಡೆಯಲಿದೆ. ಇದಕ್ಕೆ ಪೂರಕವಾಗಿ ಆ.27ರಂದು ದೇರಳಕಟ್ಟೆ ಪರಿಸರದಲ್ಲಿ 400 ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಕಳೆದ 10 ವರ್ಷಗಳಲ್ಲಿ 399 ರಕ್ತದಾನ ಶಿಬಿರಗಳ ಮೂಲಕ 3,5000ಕ್ಕೂ ಅಧಿಕ ಯುನಿಟ್ ರಕ್ತ ಸಂಗ್ರಹಿಸಿ ವಿವಿಧ ಆಸ್ಪತ್ರೆಗಳ ಮೂಲಕ ಅಗತ್ಯವುಳ್ಳವರಿಗೆ ನೀಡಲಾಗಿದೆ ಎಂದರು.
ಇದಲ್ಲದೆ ಸಂಸ್ಥೆಯು ಬಡ ರೋಗಿಗಳಿಗೆ ಆರ್ಥಿಕ ಸಹಾಯ, ಬಡವರಿಗೆ ಆಶ್ರಯ ಎಂಬ ಯೋಜನೆಯಡಿ ಮನೆ ನಿರ್ಮಾಣ, ಪ್ರವಾಹ, ಲಾಕ್ ಡೌನ್ನಂತಹ ತುರ್ತು ಸಂದರ್ಭಗಳಲ್ಲಿ ಆಹಾರ ಧಾನ್ಯ ವಿತರಣೆ ಮೊದಲಾದ ಸಾಮಾಜಿಕ ಸೇವೆಯನ್ನು ನಡೆಸುತ್ತಾ ಬಂದಿದೆ ಎಂದರು.
ದುಬೈನಲ್ಲಿ ಫಾಝ್ ಸೂಪರ್ ಮಾರುಕಟ್ಟೆ ಎದುರು, ಹಯಾತ್ ರೆಸಿಡೆನ್ಸಿ ಎದುರು ದೇರಾ ದುಬೈ ಮತ್ತು ಅಲ್ ಖೈಲ್ ಮಾಲ್ ಅಲ್ ಖ್ಯೂಝ್ ದುಬೈನಲ್ಲಿ ರಕ್ತದಾನ ಶಿಬಿರಗಳು ಲತೀಫಾ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಅಧ್ಯಕ್ಷರಾದ ನವಾಝ್ ನರಿಂಗಾನ, ಶಾಹುಲ್ ಹಮೀದ್ ಕಾಶಿಪಟ್ನ, ಫರ್ಝಾನ್ ಸಿದ್ಧಕಟ್ಟೆ, ಲತೀಫ್ ಉಪ್ಪಿನಂಗಡಿ ಉಪಸ್ಥಿತರಿದ್ದರು.







