ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್

ಮಂಗಳೂರು : ಅರಣ್ಯ ರಕ್ಷಣೆಯ ಮೂಲಕ ದೇಶದ ರಕ್ಷಣೆ ಮಾಡುತ್ತಿರುವ ಅರಣ್ಯ ರಕ್ಷಕರಿಗೆ ಹೆಚ್ಚಿನ ಗೌರವ ದೊರೆಯ ಬೇಕಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಪಡೀಲ್‌ನಲ್ಲಿರುವ ಅರಣ್ಯ ಭವನದಲ್ಲಿ ಸೋಮವಾರ ಅರಣ್ಯ ಹುತಾತ್ಮ ಸ್ಮಾರಕಕ್ಕೆ ಗೌರವ ಸಲ್ಲಿಸಿದ ಬಳಿಕ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಖಾಕಿ ಸಮವಸ್ತ್ರ ಧಾರಣೆಯಿಂದ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಮೂಲಕ ಹಲವು ಅಧಿಕಾರಿಗಳು ನಮಗೆ ಮಾದರಿಯಾಗಿದ್ದಾರೆ. ದಂತ ಚೋರ ವೀರಪ್ಪನ್ ಕಾರ್ಯಾಚರಣೆಯಲ್ಲಿ ಬಲಿಯಾದ ಅಧಿಕಾರಿಗಳು ಇದಕ್ಕೊಂದು ಉದಾಹರಣೆಯಾಗಿದೆ ಎಂದು ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ಸುಮಾರು ೩೦೦ ವರ್ಷಗಳ ಹಿಂದೆ ಜೋದ್‌ಪುರದ ರಾಜ ಅಭಯ ಸಿಂಗ್ ಕೆಲವು ಮರಗಳನ್ನು ಕಡಿಯಲು ಆಜ್ಞೆ ಮಾಡುತ್ತಾನೆ. ಅಲ್ಲಿನ ಪರಿಸರ ಪ್ರೇಮಿಗಳಾದ ಬಿಷ್ಣೋಯಿಗಳು ಅದನ್ನು ವಿರೋಧಿಸುತ್ತಾರೆ. ಬಳಿಕ ರಾಜನ ಸೈನಿಕರು ಮರಕಡಿಯಲು ಬಂದಾಗ ಮರವನ್ನು ಅಪ್ಪಿಕೊಂಡು ತಮ್ಮ ಪ್ರಾಣವನ್ನು ಬಲಿಕೊಡುವ ಪ್ರಸಂಗ ನಡೆದಿದೆ. ನಾನೂ ಕೂಡ ಅದೇ ಊರಿಗೆ ಸೇರಿದವನು ಎಂದು ಆಯುಕ್ತ ಅನುಪಮ್ ಅಗರ್‌ವಾಲ್ ಮಾಹಿತಿ ಹಂಚಿಕೊಂಡರು.
ವೇದಿಕೆಯಲ್ಲಿ ದ.ಕ.ಜಿಲ್ಲಾ ಎಸ್ಪಿ ರಿಷ್ಯಂತ್, ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಿ.ಕರಿಕ್ಕಲ್ಲನ್, ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕಮಲಾ ಕರಿಕ್ಕಲ್ಲನ್, ಆದಾಯ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕ ಮಣಿಕಂಠನ್, ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಸರ್ವೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂತೋನಿ ಎಸ್. ಮರಿಯಪ್ಪ, ಕ್ಲಿಫರ್ಡ್ ಲೋಬೊ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಾವಳಿ ನಿಯಂತ್ರಣ ವಲಯ ಡಾ.ದಿನೇಶ್, ಎಸಿಎಫ್ ಶ್ರೀಧರ್ ಉಪಸ್ಥಿತರಿದ್ದರು.
ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.







