ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸಾಧನೆಗೆ ಸಹಕಾರಿ: ಉಮರ್ ಯು.ಎಚ್.

ಮಂಗಳೂರು: ಪಠ್ಯಪುಸ್ತಕಗಳ ಓದು ಮತ್ತು ಬರಹದಿಂದ ಶಾಲಾ ಕಾಲೇಜಿನ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಬಹುದು. ಅದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಮತ್ತು ಪಠ್ಯೇತರ ಪುಸ್ತಕಗಳನ್ನು ಓದುವ ಹಾಗೂ ಬರೆಯುವ ಹವ್ಯಾಸವನ್ನು ಬೆಳೆಸಿಕೊಂಡರೆ ವಿದ್ಯಾರ್ಥಿಗಳು ಸಾಧಕರಾಗಲು ಸಹಕಾರಿಯಾಗಬಹುದು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್. ಹೇಳಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ನಗರದ ನ್ಯಾಶನಲ್ ಟ್ಯುಟೋರಿಯಲ್ ಕಾಲೇಜಿನ ಸಹಯೋಗದೊಂದಿಗೆ ಗುರುವಾರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಬ್ಯಾರಿ ಸಾಹಿತ್ಯ ಕಮ್ಮಟ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬ್ಯಾರಿ ಸಮುದಾಯದ ವಿದ್ಯಾರ್ಥಿ ಯುವಜನರು ಆಡಳಿತ, ನ್ಯಾಯಾಂಗ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರುವ ಗುರಿಗೆ ಆದ್ಯತೆ ನೀಡಬೇಕಾದ ಅಗತ್ಯವಿದೆ ಎಂದು ಉಮರ್ ಯು.ಎಚ್. ತಿಳಿಸಿದರು.
ಅಖಿಲ ಭಾರತ ಬ್ಯಾರಿ ಪರಿಷತ್‌ನ ಮಹಿಳಾ ಘಟಕದ ಅಧ್ಯಕ್ಷೆ ಶಮೀಮಾ ಕುತ್ತಾರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಸದಸ್ಯ, ಕಾರ್ಯಕ್ರಮದ ಸದಸ್ಯ ಸಂಚಾಲಕ ಯು. ಎಚ್. ಖಾಲಿದ್ ಉಜಿರೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.
ವೇದಿಕೆಯಲ್ಲಿ ನ್ಯಾಷನಲ್ ಟ್ಯುಟೋರಿಯಲ್‌ನ ಮುಖ್ಯ ಶಿಕ್ಷಕಿ ವಿದ್ಯಾ ಭಟ್, ಅಕಾಡಮಿಯ ಸದಸ್ಯ ಹಮೀದ್ ಹಸನ್ ಮಾಡೂರು, ಉಪನ್ಯಾಸಕಿಯರಾದ ಶೋಭಾ, ಜಯಲಕ್ಷ್ಮಿ, ರಿಂಶಾ ಉಪಸ್ಥಿತರಿದ್ದರು.
ಉಪನ್ಯಾಸಕಿ ಶುಭಾ ಕಾರ್ಯಕ್ರಮ ನಿರೂಪಿಸಿದರು. ಕಚೇರಿ ವ್ಯವಸ್ಥಾಪಕಿ ಅನಿತಾ ವಂದಿಸಿದರು.







