FACT CHECK | ವೈರಲ್ ವೀಡಿಯೊಗೂ ಕೊಳತ್ತಮಜಲಿನಲ್ಲಿ ಹತ್ಯೆಯಾದ ಅಬ್ದುಲ್ ರಹ್ಮಾನ್ ಗೂ ಸಂಬಂಧವಿಲ್ಲ
ಬೇರೆಯವರ ನಡುವಿನ ದನದ ವ್ಯಾಪಾರದ ಕ್ಷುಲ್ಲಕ ಜಗಳವನ್ನು ರಹ್ಮಾನ್‌ಗೆ ತಳುಕುಹಾಕಿದ ಸಂಘಪರಿವಾರ

ಮಂಗಳೂರು : ದುಷ್ಕರ್ಮಿಗಳಿಂದ ಹತ್ಯೆಯಾದ ಅಬ್ದುಲ್ ರಹ್ಮಾನ್ ಅವರು, ಹಿಂದೂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಶೀರ್ಷಿಕೆ ಜೊತೆ ವೈರಲ್ ಆದ ವೀಡಿಯೊದಲ್ಲಿರುವುದು, ಕೊಳತ್ತಮಜಲಿನಲ್ಲಿ ಕೊಲೆಯಾದ ಅಬ್ದುಲ್ ರಹ್ಮಾನ್ ಅವರು ಅಲ್ಲ ಎಂದು ಸ್ಥಳೀಯರು ʼವಾರ್ತಾಭಾರತಿʼಗೆ ತಿಳಿಸಿದ್ದಾರೆ.
ಕೊಲೆಯಾದ ಅಬ್ದುಲ್ ರಹ್ಮಾನ್ ಅವರ ತೇಜೋವಧೆ ಮಾಡುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ರಹ್ಮಾನ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದೆ. ರಹ್ಮಾನ್ ನಿಷೇಧಿತ ಸಂಘಟನೆಯೊಂದಕ್ಕೆ ಸೇರಿದವರು, ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು, ಇಂಥವರನ್ನು ಅಮಾಯಕ ಎಂದು ಸಮಾಜ ಬಿಂಬಿಸುತ್ತಿದೆ ಎಂದು ʼಹಿಂದೂ ಸಾಮ್ರಾಟ್ ಧರ್ಮ ಸೇನೆʼ(Hindu samrat Dharma sene) ಎನ್ನುವ ಸಂಘಪರಿವಾರ ಬೆಂಬಲಿತ ಫೇಸ್ ಬುಕ್ ಪೇಜ್ ಒಂದರಲ್ಲಿ ವೀಡಿಯೊ ಹಂಚಿಕೊಳ್ಳಲಾಗಿತ್ತು. ಇದನ್ನು ಬೆಂಬಲಿಸಿ ಹಲವಾರು ಮಂದಿ ಲೈಕ್ ಮಾಡಿದ್ದು, ಕಮೆಂಟ್ ಹಾಕಿ ಶೇರ್ ಕೂಡ ಮಾಡಿದ್ದರು.
ಈ ಬಗ್ಗೆ ʼವಾರ್ತಾಭಾರತಿʼಯು ಫ್ಯಾಕ್ಟ್ ಚೆಕ್ ಮಾಡಿದಾಗ ವೀಡಿಯೊದಲ್ಲಿನ ಘಟನೆಗೂ, ದುಷ್ಕರ್ಮಿಗಳಿಂದ ಇತ್ತೀಚಿಗೆ ಹತ್ಯೆಯಾದ ಅಬ್ದುಲ್ ರಹ್ಮಾನ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಎಸ್ ಕೆ ಎಸ್ ಎಸ್ ಎಫ್ ಸಂಘಟನೆಯ ಕೊಳತ್ತ ಮಜಲ್ ಘಟಕದ ಅಧ್ಯಕ್ಷ ಶಬೀರ್, “ಈ ಘಟನೆಗೂ, ಕೊಳತ್ತಮಜಲ್ ನಲ್ಲಿ ಹತ್ಯೆಯಾದ ಅಬ್ದುಲ್ ರಹ್ಮಾನ್‌ಗೂ ಯಾವುದೇ ಸಂಬಂಧವಿಲ್ಲ. ಈ ಘಟನೆ ನಡೆದ ದಿನ ಅಬ್ದುಲ್ ರಹ್ಮಾನ್ ಊರಿನಲ್ಲಿರಲಿಲ್ಲ. ನಮ್ಮೂರಿನಿಂದ 4 ಕಿ.ಮೀ.ದೂರದಲ್ಲಿರುವ ಪಳ್ಳಿಪ್ಪಾಡಿಯ ಸುಲೈಮಾನ್ ಮತ್ತು ಕೊಳತ್ತಮಜಲಿನ ಉಮೇಶ್ ಎಂಬವರ ನಡುವಿನ ದನ ವ್ಯಾಪಾರದ ಸಂಬಂಧದ ಕ್ಷುಲ್ಲಕ ಜಗಳ ಅದು. ಕೊಳತ್ತಮಜಲಿನಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಸುಲೈಮಾನ್ ಬಂದಿದ್ದರು. ಅವರನ್ನು ಕಂಡ ಉಮೇಶ್ ತಮ್ಮಿಂದ ದನ ತೆಗದುಕೊಂಡು ಹೋಗಿರುವುದರ ಹಣ ಕೊಡಲು ಬಾಕಿಯಿದೆ ಎಂದು ಮಾತಿಗೆ ಮಾತು ಬೆಳೆಸಿದ್ದರು” ಎಂದರು.
“ಕುಡಿದ ಮತ್ತಿನಲ್ಲಿದ್ದ ಉಮೇಶ್, ಸುಲೇಮಾನ್ ಅವರನ್ನು ತಳ್ಳಿದ್ದರಿಂದ ಅವರು ಕೆಳಗೆ ಬಿದ್ದಿದ್ದಾರೆ. ಆಗ ಪಳ್ಳಿಪ್ಪಾಡಿಯಿಂದ ಮದುವೆಗೆ ಬಂದಿದ್ದ ಜನರು, ಇದನ್ನು ನೋಡಿ ಸುಲೇಮಾನ್ ಅವರ ಮಕ್ಕಳಿಗೆ ಫೋನ್ ಮಾಡಿ ಘಟನೆಯ ಕುರಿತು ಹೇಳಿದ್ದಾರೆ. ಅಲ್ಲಿಗೆ ಬಂದ ಸುಲೇಮಾನ್ ಅವರ ಮಕ್ಕಳು ಮತ್ತು ಉಮೇಶ್ ನಡುವೆ ಹೊಯ್ ಕೈ ನಡೆದಿದೆ. ಸ್ಥಳಕ್ಕೆ ಬಂದ ಸ್ಥಳೀಯ ತೇಜು ಎಂಬಾತ ಉಮೇಶ್ ಪರವಾಗಿ ಸ್ವಲ್ಪ ಗಲಾಟೆಯೆಬ್ಬಿಸಿದ್ದಾನೆ. ನೆರೆದ ಜನರಲ್ಲಿ ಬ್ಯಾರಿಗಳಿಂದ ಏನು ಮಾಡಲಿಕ್ಕೆ ಆಗುತ್ತೆ ಎಂದು ಕೆರಳಿಸಿದ್ದಾನೆ. ಇದರಿಂದ ಕೆರಳಿದ ಅವರ ನಡುವೆ ನೂಕಾಟ ತಳ್ಳಾಟ ನಡೆದಿದೆ. ಇದನ್ನು ನೋಡುತ್ತಿದ್ದ ಕೊಳತ್ತಮಜಲಿನ ಜನರು ಯಾರೂ ಅವರ ಬಳಿ ಹೋಗಿಲ್ಲ. ಅವರು ದೂರದಿಂದಲೇ ಗಮನಿಸಿದ್ದಾರೆ. ಬಳಿಕ ಎರಡೂ ಕಡೆಯುವರಿಂದ ದೂರು – ಪ್ರತಿದೂರು ನಡೆದು, ಇತ್ಯರ್ಥವಾಗಿದೆ” ಎಂದು ಘಟನೆಯ ಕುರಿತು ವಿವರಿಸಿದರು.
“ವೈರಲ್ ಆಗುತ್ತಿರುವ ವೀಡಿಯೊಗೂ ಹತ್ಯೆಯಾದ ಅಬ್ದುಲ್ ರಹ್ಮಾನ್ ಗೂ ಯಾವುದೇ ಸಂಬಂಧವಿಲ್ಲ. ರಹ್ಮಾನ್ ಜಾತ್ಯತೀತ ತತ್ವವನ್ನು ಅಳವಡಿಸಿಕೊಂಡು ಬದುಕಿದ ವ್ಯಕ್ತಿಯಾಗಿದ್ದು, ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರಲ್ಲ” ಎಂದು ಎಸ್ ಕೆ ಎಸ್ ಎಸ್ ಎಫ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ ಪ್ರತಿಕ್ರಿಯಿಸಿದರು.







