ಪೊಲೀಸ್ ಸಿಬ್ಬಂದಿ ದಿ.ಹರೀಶ್ ಕುಟುಂಬಕ್ಕೆ ಬಿಒಬಿ ಗ್ರೂಪ್ ವಿಮಾ ಯೋಜನೆಯಡಿ 70 ಲಕ್ಷ ರೂ. ನೆರವು

ಮಂಗಳೂರು, ಜ.15: ರಸ್ತೆ ಅಪಘಾತದಲ್ಲಿ ಮೃತಪಟ್ಟ ಪೊಲೀಸ್ ಸಿಬ್ಬಂದಿ ಹರೀಶ್ ಜಿ.ಎನ್. ಕುಟುಂಬಕ್ಕೆ ಬ್ಯಾಂಕ್ ಆಫ್ ಬರೋಡಾ ಸಂಸ್ಥೆಯು ‘ಬ್ಯಾಂಕ್ ಆಫ್ ಬರೋಡಾ ಗ್ರೂಪ್ ಇನ್ಸೂರೆನ್ಸ್ ಯೋಜನೆಯಲ್ಲಿ 70 ಲಕ್ಷ ರೂ. ಮೊತ್ತದ ಆರ್ಥಿಕ ನೆರವು ನೀಡಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರ ಮೂಲಕ ಬ್ಯಾಂಕ್ ಆಫ್ ಬರೋಡಾ ಮಂಗಳೂರು ನಗರ ಪ್ರಾದೇಶಿಕ ಮುಖ್ಯಸ್ಥ ಸಿ.ವಿ.ಎಸ್. ಚಂದ್ರಶೇಖರ್ ಅವರು ಈ ಚೆಕ್ ಅನ್ನು ಹರೀಶ್ ಕುಟುಂಬಕ್ಕೆ ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಸಿ.ವಿ.ಎಸ್. ಚಂದ್ರಶೇಖರ್, ಕಷ್ಟಕಾಲದಲ್ಲಿ ತನ್ನ ಗ್ರಾಹಕರ ಕುಟುಂಬಗಳಿಗೆ ಬೆಂಬಲವಾಗಿ ನಿಲ್ಲಲು ಬ್ಯಾಂಕ್ ಆಫ್ ಬರೋಡಾ ಬದ್ಧವಾಗಿದೆ ಮತ್ತು ತನ್ನ ವಿಮಾ ಹಾಗೂ ಕಲ್ಯಾಣ ಯೋಜನೆಗಳ ಮೂಲಕ ಆರ್ಥಿಕ ರಕ್ಷಣೆಯನ್ನು ನೀಡುವುದನ್ನು ಮುಂದುವರಿಸುತ್ತದೆ ಎಂದು ತಿಳಿಸಿದರು.
2015ರ ಫೆಬ್ರವರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಂಗಳೂರು ಕಂಕನಾಡಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಮೈಸೂರಿನ ಗಾಯ ಹಳ್ಳಿ ಗ್ರಾಮದ ಹರೀಶ್ ಜಿ.ಎನ್. ಮೃತಪಟ್ಟಿದ್ದರು.





