ಫೆಕ್ಸ್ ತೆರವು| ಮಂಗಳೂರು ಮನಪಾ ಅಧಿಕಾರಿಗಳಿಂದ ತಾರತಮ್ಯ: ಶಾಸಕ ಕಾಮತ್ ಆರೋಪ

ಮಂಗಳೂರು, ಡಿ.23: ನಗರದ ಗೂಡಂಗಡಿ ಹಾಗೂ ಫೆಕ್ಸ್ ತೆರವು ವಿಚಾರದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.
ನಗರದ ಅಟಲ್ ಸೇವಾ ಕೇಂದ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪಾಲಿಕೆ ವ್ಯಾಪ್ತಿಯ ಕದ್ರಿ ಪಾರ್ಕ್, ಲೇಡಿಹಿಲ್ ಸೇರಿದಂತೆ ಬಹುತೇಕ ಕಡೆಗಳಲ್ಲಿ ಅಧಿಕಾರಿಗಳು ಗೂಡಂಗಡಿ ತೆರವುಗೊಳಿಸಿ ದ್ದಾರೆ. ಕಾಂಗ್ರೆಸ್ ಮುಖಂಡರು ಸೂಚಿಸಿದ ಕಡೆಗಳಲ್ಲಿ ಮಾತ್ರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಉಳಿದ ಕಡೆಗಳಲ್ಲಿ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಆ ಮೂಲಕ ಆಡಳಿತಾರೂಢ ಕಾಂಗ್ರೆಸ್‌ನ ಕೈಗೊಂಬೆಯಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದರು.
ಗೂಡಂಗಡಿಗಳನ್ನು ತೆರವುಗೊಳಿಸುವುದಿದ್ದರೆ ಎಲ್ಲವನ್ನೂ ತೆರವುಗೊಳಿಸಬೇಕು. ಇಲ್ಲದಿದ್ದರೆ ಯಾವುದನ್ನೂ ಮುಟ್ಟಬಾರದು. ಕಾಂಗ್ರೆಸ್ ಮುಖಂಡರ ಸೂಚನೆಯಂತೆ ನಡೆಯುವ ಪಾಲಿಕೆ ಅಧಿಕಾರಿಗಳ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಈ ಹಿಂದೆ ಬಿಜೆಪಿ ಆಡಳಿತದಲ್ಲಿದ್ದಾಗ ಇಂತಹ ಅನ್ಯಾಯಗಳಿಗೆ ಆಸ್ಪದ ಇರಲಿಲ್ಲ. ಈಗ ಆಡಳಿತಾಧಿ ಕಾರಿಗಳು ಕಾಂಗ್ರೆಸ್ ಮುಖಂಡರ ನಿರ್ದೇಶನದಂತೆ ನಡೆಯುತ್ತಿದ್ದಾರೆ ಕಮ್ಯುನಿಸ್ಟರು ಕೂಡ ಅವರ ಪಕ್ಷದವರನ್ನು ಹೊರತುಪಡಿಸಿ ಬೇರೆಯವರ ಗೂಡಂಗಡಿ ಎತ್ತಂಗಡಿ ಬಗ್ಗೆ ಮಾತನಾಡುತ್ತಿಲ್ಲ ಎಂದರು.
ಫ್ಲೆಕ್ಸ್‌ಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎನ್ನುವ ಪಾಲಿಕೆಯ ಅಧಿಕಾರಿಗಳು, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸಿದಾಗ, ಕಾಂಗ್ರೆಸ್ ಕಾರ್ಯಕ್ರಮಗಳು ನಡೆದಾಗ, ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಕ್ರೀಡೆಗಳು ನಡೆದಾಗ ಹಾಕಿವ ಬ್ಯಾನರ್, ಫ್ಲೆಕ್ಸ್‌ಗಳ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವೇದವ್ಯಾಸ್ ಕಾಮತ್ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಭಾಸ್ಕರಚಂದ್ರ ಶೆಟ್ಟಿ, ಲಲ್ಲೇಶ್ ಉಪಸ್ಥಿತರಿದ್ದರು.







