ಫೆ.23: ಕೋಟಿ-ಚೆನ್ನಯ ಸೇವಾ ಬ್ರಿಗೇಡ್ ಸೀಸನ್-3 ರಾಜ್ಯಮಟ್ಟದ ಹಗ್ಗ ಜಗ್ಗಾಟ

ಮಂಗಳೂರು: ಕಳೆದ ನಾಲ್ಕು ವರ್ಷಗಳಿಂದ ಶೈಕ್ಷಣಿಕ, ಕ್ರೀಡೆ, ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವ ಕೋಟಿ-ಚೆನ್ನಯ ಸೇವಾ ಬ್ರಿಗೇಡ್ ಮೂರನೇ ಆವೃತ್ತಿಯ ರಾಜ್ಯಮಟ್ಟದ ಹಗ್ಗ ಜಗ್ಗಾಟ ಕ್ರೀಡಾಕೂಟವನ್ನು ಫೆ.23ರಂದು ಕರಾವಳಿ ಉತ್ಸವ ಮೈದಾನದಲ್ಲಿ ಹಮ್ಮಿಕೊಂಡಿದೆ ಎಂದು ಸಂಘಟನೆಯ ಅಧ್ಯಕ್ಷ ಕಿರಣ್ ಕುಮಾರ್ ಕೋಡಿಕಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
“ಹಲವಾರು ವರ್ಷಗಳಿಂದ ಅಂಧ ಕಲಾವಿದರಿಗೆ ಆರ್ಥಿಕ ಸಹಾಯ, ಏಡ್ಸ್ ಪೀಡಿತ ಮಕ್ಕಳ ಆಶ್ರಮಕ್ಕೆ ಆರ್ಥಿಕ ಸಹಾಯ, ಸರಕಾರದ ಸವಲತ್ತುಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಉಚಿತ ಆಯುಷ್ಮಾನ್ ಕಾರ್ಡ್, ಆಧಾರ್ ತಿದ್ದುಪಡಿ, ಅಂಚೆ ವಿಮೆ ಕ್ಯಾಂಪ್, ಕಂಕನಾಡಿ ಗರೋಡಿ ಜಾತ್ರೆಯ ಪ್ರಯುಕ್ತ ಗರೋಡಿ ದೇವಸ್ಥಾನದಲ್ಲಿ ಶ್ರಮದಾನ, ಜನಸೇವೆ ಮಾಡುವ ಸೇವಾ ಸಂಸ್ಥೆಗಳಿಗೆ ಆರ್ಥಿಕ ಸಹಾಯ, ರಕ್ತದಾನ ಶಿಬಿರಗಳನ್ನು ನಡೆಸುತ್ತಾ ಬಂದಿರುತ್ತೇವೆ. ಆರ್ಥಿಕವಾಗಿ ಹಿಂದುಳಿದವರಿಗೆ ವೀಲ್ ಚೇರ್ ಮತ್ತು ವಾಕರ್ ವಿತರಣೆ, ವಿಶೇಷ ಚೇತನ ಮಕ್ಕಳಿಗೆ ಸೈಕ್ಲಿಂಗ್ ಕಿಟ್ ವಿತರಣೆ, ಆಂಬುಲೆನ್ಸ್ ನಡೆಸುವ ಸಂಸ್ಥೆಗಳಿಗೆ ಧನಸಹಾಯ, ಶ್ರವಣ ಯಂತ್ರ, ಅನಾರೋಗ್ಯ ಪೀಡಿತ ಮಕ್ಕಳಿಗೆ ಆರ್ಥಿಕ ಸಹಾಯ ನೀಡಲಿದ್ದೇವೆ. ಕ್ರೀಡೆಯಲ್ಲಿ ಭಾಗವಹಿಸುವ ತಂಡಕ್ಕೆ ಉಚಿತ ಪ್ರವೇಶ ನೀಡಿದ್ದು ಗೆದ್ದ ತಂಡಕ್ಕೆ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿಯನ್ನು ಒಂದರಿಂದ ನಾಲ್ಕನೇ ಸ್ಥಾನದವರೆಗೆ, ಪುರುಷರ ಹಾಗೂ ಮಹಿಳೆಯರ ವಿಭಾಗಕ್ಕೆ ನೀಡಲಾಗುವುದು'' ಎಂದರು.
ಇದರೊಂದಿಗೆ ಇದೇ ದಿನ ವಿಶೇಷವಾಗಿ ಕ್ರಿಕೆಟ್ ಅಭಿಮಾನಿಗಳಿಗೆ ಇಂಡಿಯಾ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯವಿರುವ ಕಾರಣ ಲೈವ್ ಪ್ರದರ್ಶನವನ್ನು ಅಪರಾಹ್ನ 2:30ರಿಂದ ದೊಡ್ಡದಾದ ಎಲ್.ಇ.ಡಿ. ಪರದೆಯ ಮೂಲಕ ಫ್ಯಾನ್ ಪಾರ್ಕ್ನ ಕಲ್ಪನೆಯಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನಮ್ಮ ಜಿಲ್ಲೆಯ ಸಂಸದರು, ಶಾಸಕರು ಹಾಗೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಕಿರಣ್ ಕುಮಾರ್ ಕೋಡಿಕಲ್, ಪ್ರಧಾನ ಕಾರ್ಯದರ್ಶಿ ಉಮೇಶ್ ಮಲರಾಯಸಾನ, ಸದಾನಂದ ಅಂಚನ್, ದೇವಿಪ್ರಸಾದ್ ಶೆಟ್ಟಿ, ಧೀರೇಶ್ ಕೊಲ್ಯ, ನವನೀತ್ ಕೋಟ್ಯಾನ್, ನಟರಾಜ್ ಪಚ್ಚನಾಡಿ ಮತ್ತಿತರರು ಉಪಸ್ಥಿತರಿದ್ದರು.