ಫೆ.4–8: ಸಮಸ್ತ ಶತಮಾನೋತ್ಸವ ಅಂತಾರಾಷ್ಟ್ರೀಯ ಮಹಾ ಸಮ್ಮೇಳನ

ಮಂಗಳೂರು, ಫೆ.2: ಫೆಬ್ರವರಿ 4ರಿಂದ 8ರವರೆಗೆ ಕೇರಳದ ಕುಣಿಯದಲ್ಲಿ ಸಮಸ್ತ ಶತಮಾನೋತ್ಸವ ಅಂತರಾಷ್ಟ್ರೀಯ ಮಹಾ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದಲ್ಲಿ 33,313 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಬಂಬ್ರಾಣ ಉಸ್ತಾದ್ ಅಬ್ದುಲ್ ಖಾದರ್ ಮುಸ್ಲಿಯಾರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಮ್ಮೇಳನದ ಸಂಘಟಕರಾದ ಪ್ರೊ. ಅನೀಸ್ ಕೌಸರಿ ಸಮ್ಮೇಳನದ ವಿವರಗಳನ್ನು ನೀಡುತ್ತಾ, ಈ ಬಾರಿಯ ಸಮ್ಮೇಳನವು ಪ್ರತಿನಿಧಿಗಳ ಭಾಗವಹಿಸುವಿಕೆಯ ದೃಷ್ಟಿಯಿಂದ ಗಿನ್ನೆಸ್ ದಾಖಲೆಗೆ ಪಾತ್ರವಾಗಲಿದೆ ಎಂದರು. ಸಮಾರೋಪ ಮಹಾ ಸಮ್ಮೇಳನದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಆಗಮಿಸುವ ಲಕ್ಷಾಂತರ ಜನರನ್ನು ಸ್ವಾಗತಿಸಲು ಕುಣಿಯ ಗ್ರಾಮ ಸರ್ವಸನ್ನದ್ಧವಾಗಿದೆ. ಐದು ದಿನಗಳ ಕಾಲ ನಡೆಯುವ ಈ ಬೃಹತ್ ಸಮಾವೇಶದ ಸಿದ್ಧತೆಗಳು ತಿಂಗಳುಗಳ ಹಿಂದೆಯೇ ಆರಂಭವಾಗಿವೆ. ಸಮ್ಮೇಳನದ ಅಂಗವಾಗಿ ಆಯೋಜಿಸಲಾದ ‘ಗ್ಲೋಬಲ್ ಎಕ್ಸ್‌ಪೋ’ಗೆ ಶುಕ್ರವಾರ ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದರು.
ಧ್ವಜ ಸ್ವೀಕಾರ ಮತ್ತು ಮೆರವಣಿಗೆ
ಫೆಬ್ರವರಿ 2ರಂದು ಸಂಜೆ 4 ಗಂಟೆಗೆ ಕೋಝಿಕ್ಕೋಡ್‌ನ ವರಕ್ಕಲ್ ಮಖಾಮ್‌ನಲ್ಲಿ ಸಮಸ್ತ ಅಧ್ಯಕ್ಷರಾದ ಸೈಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ಳ್ ಅವರ ನೇತೃತ್ವದಲ್ಲಿ ಝಿಯಾರತ್ ನಡೆಯಲಿದೆ. ಬಳಿಕ ಸಮ್ಮೇಳನ ನಗರಿಯ ಧ್ವಜಸ್ತಂಭದಲ್ಲಿ ಏರಿಸಲು ವಿಶ್ವದ ವಿವಿಧ ಭಾಗಗಳಿಂದ ತರಲಾದ 100 ಧ್ವಜಗಳನ್ನು ಸಮಸ್ತ ಪ್ರಧಾನ ಕಾರ್ಯದರ್ಶಿ ಪ್ರೊ. ಕೆ. ಅಲಿಕುಟ್ಟಿ ಮುಸ್ಲಿಯಾರ್ ಅವರು ಸ್ವೀಕರಿಸಲಿದ್ದಾರೆ.
ಬುಧವಾರ ಮಧ್ಯಾಹ್ನ 2 ಗಂಟೆಗೆ ತಳಂಗರೆ ಮಲಿಕ್ ದೀನಾರ್ ಮುರಾದಿಂದ 3,313 ಸ್ವಯಂಸೇವಕರ (ವಿಖಾಯ, ವಿದ್ಯಾ, ಅಮೀಲಾ ವಿಭಾಗಗಳು) ಬೆಂಗಾವಲಿನೊಂದಿಗೆ ಧ್ವಜಗಳನ್ನು ಸಮ್ಮೇಳನ ನಗರಿಗೆ ತರಲಾಗುವುದು. ಸಂಜೆ 4 ಗಂಟೆಗೆ ನೂರು ಧ್ವಜಗಳನ್ನು ಏರಿಸುವ ಮೂಲಕ ಸಮ್ಮೇಳನಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.
16 ಅಧ್ಯಯನ ವಿಷಯಗಳು – 33,313 ಪ್ರತಿನಿಧಿಗಳು
“ಆದರ್ಶ, ಪಾವಿತ್ರ್ಯ ಮತ್ತು ಶತಮಾನಗಳು” ಎಂಬ ಆಧಾರಗಳೊಂದಿಗೆ ನಡೆಯುವ ಶೈಕ್ಷಣಿಕ ಶಿಬಿರವು ಫೆಬ್ರವರಿ 6ರಂದು ಸಂಜೆ 4 ಗಂಟೆಗೆ ಆರಂಭಗೊಳ್ಳಲಿದೆ. ಎಸ್.ವೈ.ಎಸ್. ರಾಜ್ಯ ಕಾರ್ಯದರ್ಶಿ ಸೈಯ್ಯದ್ ಮೊಹಮ್ಮದ್ ಕೋಯ ಜಮಲುಲ್ಲೈಲಿ ತಂಙಳ್ ಅವರ ಅಧ್ಯಕ್ಷತೆಯಲ್ಲಿ ಇರಾಕ್‌ನ ಡಾ. ರಾಫಿ ರಿಫಾಈ ಉದ್ಘಾಟಿಸುವರು.
ಕೆ.ಸಿ. ವೇಣುಗೋಪಾಲ್ ಸಂಸದರು, ಎಂ.ಪಿ. ಅಬುಸ್ಸಮದ್ ಸಮದಾನಿ, ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಕರ್ನಾಟಕ ಸಚಿವ ಝಮೀರ್ ಅಹ್ಮದ್ ಖಾನ್, ಶಾಸಕರಾದ ರಮೇಶ್ ಚೆನ್ನಿತ್ತಲ, ಪಿ. ಅಬ್ದುಲ್ ಹಮೀದ್, ಕುರುಕ್ಕೋಳಿ ಮೊಯ್ದಿನ್ ಮೊದಲಾದವರು ಭಾಗವಹಿಸುವರು.
ಫೆಬ್ರವರಿ 6ರಂದು ಮಧ್ಯಾಹ್ನ 2.30ಕ್ಕೆ ವೇದಿಕೆ–2ರಲ್ಲಿ ನಡೆಯುವ ಜನರಲ್ ಅಸೆಂಬ್ಲಿಯನ್ನು ಕೇರಳ ಸರ್ಕಾರದ ಸಚಿವ ವಿ. ಶಿವಕುಟ್ಟಿ ಉದ್ಘಾಟಿಸುವರು. ರಾತ್ರಿ 7 ಗಂಟೆಗೆ ಮಾಧ್ಯಮ ಸೆಮಿನಾರ್ ಹಾಗೂ ರಾತ್ರಿ 9 ಗಂಟೆಗೆ ಕ್ಯಾಂಪಸ್ ಕಾಂಕ್ಲೇವ್ ನಡೆಯಲಿದೆ.
ಫೆಬ್ರವರಿ 7ರ ಕಾರ್ಯಕ್ರಮಗಳು
ಬೆಳಗ್ಗೆ 9 ಗಂಟೆಗೆ ವೇದಿಕೆ–1ರಲ್ಲಿ ನಡೆಯುವ ಶಿಬಿರದ ಮೊದಲ ಅಧಿವೇಶನವನ್ನು ವೆಲ್ಲೂರು ಜಾಮಿಅ ಬಾಖಿಯಾತ್ ಪ್ರಿನ್ಸಿಪಾಲ್ ಅಬ್ದುಲ್ ಹಮೀದ್ ಹಝ್ರತ್ ಉದ್ಘಾಟಿಸುವರು. ಶಾಸಕರಾದ ಸನ್ನಿ ಜೋಸೆಫ್, ಮಂಜಳಂಕುಳಿ ಅಲಿ, ಪಿ.ಟಿ.ಎ. ರಹೀಂ, ಪಿ. ಉಬೈದುಲ್ಲ ಭಾಗವಹಿಸುವರು.
ಮಧ್ಯಾಹ್ನ 2 ಗಂಟೆಗೆ ನಡೆಯುವ ಅಧಿವೇಶನವನ್ನು ಪಾಣಕ್ಕಾಡ್ ಸೈಯ್ಯದ್ ಮುನವ್ವರಲಿ ಶಿಹಾಬ್ ತಂಙಳ್ ಉದ್ಘಾಟಿಸುವರು. ಲಕ್ಷದ್ವೀಪ ಸಂಸದ ಅಡ್ವ. ಹಮ್ದುಲ್ ಸಈದ್, ಪುದುಚೇರಿ ಸಂಸದ ವಿ. ವೈದ್ಯಲಿಂಗಂ ಹಾಗೂ ಪುದುಚೇರಿ ಪ್ರತಿಪಕ್ಷ ನಾಯಕ ಆರ್. ಶಿವ ವಿಶಿಷ್ಟ ಅತಿಥಿಗಳಾಗಿರುವರು.
ರಾತ್ರಿ 7 ಗಂಟೆಗೆ ಮೂರನೇ ಅಧಿವೇಶನವು ಸೈಯ್ಯದ್ ಹಮೀದಲಿ ಶಿಹಾಬ್ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಶಿಕ್ಷಣ ಮಂಡಳಿ ಅಧ್ಯಕ್ಷ ಪಿ.ಕೆ. ಮೂಸಕ್ಕುಟ್ಟಿ ಹಝ್ರತ್ ಉದ್ಘಾಟಿಸುವರು. ಸಂಸದ ಎನ್.ಕೆ. ಪ್ರೇಮಚಂದ್ರನ್ ಮುಖ್ಯ ಅತಿಥಿಯಾಗಿರುವರು.
ವೇದಿಕೆ–2ರಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯುವ ಸಾಂಸ್ಕೃತಿಕ ಸಭೆಯನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯ ಬಶೀರ್ ಅಬ್ದುಲ್ಲ ಫೈಝಿ ಅವರ ಅಧ್ಯಕ್ಷತೆಯಲ್ಲಿ ಸಂಸದ ಶಶಿ ತರೂರ್ ಉದ್ಘಾಟಿಸುವರು. ಮಧ್ಯಾಹ್ನ 2 ಗಂಟೆಗೆ ಆರೋಗ್ಯ ಸೆಮಿನಾರ್ ಹಾಗೂ ರಾತ್ರಿ 7 ಗಂಟೆಗೆ ಮೈತ್ರಿ ಸಮಾಗಮವನ್ನು ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ಉದ್ಘಾಟಿಸುವರು. ಕಥೆಗಾರ ಟಿ. ಪದ್ಮನಾಭನ್ ಮುಖ್ಯ ಅತಿಥಿಯಾಗಿರುವರು.
ವೇದಿಕೆ–3ರಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ನ್ಯಾಷನಲ್ ಎಜುಕಾನ್‌ಕ್ಲೇವ್ ಹಾಗೂ ರಾತ್ರಿ 7 ಗಂಟೆಗೆ ಹಿತೈಷಿಗಳ ಸಭೆ ನಡೆಯಲಿದೆ.
ಫೆಬ್ರವರಿ 8ರ ಕಾರ್ಯಕ್ರಮ
ಬೆಳಗ್ಗೆ 9 ಗಂಟೆಗೆ ಶಿಬಿರದ ಮೊದಲ ಅಧಿವೇಶನವು ಸೈಯ್ಯದ್ ಮುಈನಲಿ ಶಿಹಾಬ್ ತಂಙಳ್ ಅವರ ಅಧ್ಯಕ್ಷತೆಯಲ್ಲಿ ಎ.ವಿ. ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಉದ್ಘಾಟಿಸುವರು. ಬೆಳಗ್ಗೆ 11.30ಕ್ಕೆ ಸನಾಈ ಪದವಿ ಪ್ರದಾನ ಹಾಗೂ ಮಧ್ಯಾಹ್ನ 1 ಗಂಟೆಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ. ಇದನ್ನು ಅಸ್ತರಲಿ ಫೈಝಿ ಪಟ್ಟಿಕ್ಕಾಡ್ ಉದ್ಘಾಟಿಸುವರು.
ವೇದಿಕೆ–2ರಲ್ಲಿ ಬೆಳಗ್ಗೆ 8.30ಕ್ಕೆ ಪ್ರವಾಸಿ ಸಮಾಗಮವನ್ನು ಸಮಸ್ತ ಪ್ರವಾಸಿ ಸೆಲ್ ಅಧ್ಯಕ್ಷ ಹಂಗುಕುಟ್ಟಿ ಬಾಖವಿ ಉದ್ಘಾಟಿಸುವರು. ಅಬೂಬಕ್ಕರ್ ಅಲ್ ಖಾಸಿಮಿ (ಕತಾರ್) ಅಧ್ಯಕ್ಷತೆ ವಹಿಸುವರು. ವೇದಿಕೆ–3ರಲ್ಲಿ ಬೆಳಗ್ಗೆ 9 ಗಂಟೆಗೆ ಗ್ಲೋಬಲ್ ಉಲಮಾ ಸಮ್ಮೇಳನ ನಡೆಯಲಿದೆ.
ಸಮಸ್ತ ಸೆಂಟನರಿ ಗ್ಲೋಬಲ್ ಎಕ್ಸ್‌ಪೋ
ಸಮಸ್ತ ನೂರನೇ ವಾರ್ಷಿಕ ಅಂತರಾಷ್ಟ್ರೀಯ ಮಹಾಸಮ್ಮೇಳನದ ಅಂಗವಾಗಿ ನಡೆಯಲಿರುವ ಗ್ಲೋಬಲ್ ಎಕ್ಸ್‌ಪೋಗೆ ಸಿದ್ಧತೆಗಳು ಅಂತಿಮ ಹಂತ ತಲುಪಿವೆ. ಸಮ್ಮೇಳನ ನಗರಿಯಿಂದ ಸುಮಾರು 500 ಮೀಟರ್ ದೂರದಲ್ಲಿರುವ ಆರು ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಹತ್ತು ಪೆವಿಲಿಯನ್‌ಗಳನ್ನು ನಿರ್ಮಿಸಲಾಗಿದೆ. ಗೋಲ್ಡನ್ ಏಜ್‌ನ ಜ್ಞಾನ–ಅವಿಷ್ಕಾರಗಳ ಪ್ರದರ್ಶನ, ಸ್ಥಳೀಯ ಪರಂಪರೆ ಮತ್ತು ಸಂಸ್ಕೃತಿಗಳ ಪರಿಚಯ, ಪುರಾತನ ಪಳ್ಳಿ ದರ್ಸ್, ಮದ್ರಸಾಗಳು ಮತ್ತು ಅರಬಿಕ್ ಕಾಲೇಜುಗಳ ಶೈಕ್ಷಣಿಕ ವ್ಯವಸ್ಥೆ, ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಸ್ಪರ್ಧಾತ್ಮಕ ಸ್ಟಾಲ್‌ಗಳು, ಎಐ ಉಸ್ತಾದ್ ಸೇರಿದಂತೆ ತಂತ್ರಜ್ಞಾನಗಳ ನವೀನ ಪ್ರದರ್ಶನ, ಕ್ಯಾಲಿಗ್ರಫಿ ಮತ್ತು ಕಲೆಗಳ ಲೋಕ, ಮಕ್ಕಳಿಗಾಗಿ ಜ್ಞಾನಾತ್ಮಕ ವಿಭಾಗಗಳು, ಪ್ಯಾನೆಲ್ ಚರ್ಚೆಗಳು, ರಾಷ್ಟ್ರೀಯ–ಅಂತರಾಷ್ಟ್ರೀಯ ಕಲಾವೈಭವಗಳ ಪ್ರದರ್ಶನ ಹಾಗೂ ಆಹಾರ ಮತ್ತು ವಸ್ತು ಮಾರಾಟ ವ್ಯವಸ್ಥೆ ಇರಲಿದೆ.
ಫೆ.8ರಂದು ಸಮಾರೋಪ ಮಹಾ ಸಮ್ಮೇಳನ
ಫೆಬ್ರವರಿ 8ರಂದು ಸಂಜೆ ನಡೆಯುವ ಸಮಾರೋಪ ಮಹಾ ಸಮ್ಮೇಳನದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳಲಿದ್ದಾರೆ. ಸೈಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಬಳ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭವನ್ನು ಈಜಿಪ್ಟ್‌ನ ಅಲ್–ಅಝರ್ ವಿಶ್ವವಿದ್ಯಾಲಯದ ಡೈರೆಕ್ಟರ್ ಡಾ. ಸಲಾಮಾ ಜುಮುಅ ದಾವೂದ್ ಉದ್ಘಾಟಿಸುವರು. ಪಾಣಕ್ಕಾಡ್ ಸೈಯ್ಯದ್ ಸಾದಿಖಲಿ ಶಿಹಾಬ್ ತಂಜಳ್ ಮುಖ್ಯ ಭಾಷಣ ಮಾಡಲಿದ್ದಾರೆ.
ಲುಲು ಇಂಟರ್‌ನ್ಯಾಷನಲ್ ಗ್ರೂಪ್ ಚೇರ್ಮನ್ ಎಂ.ಎ. ಯೂಸುಫ್ ಅಲಿ ಅವರಿಗೆ ಸಮಸ್ತ ಸೆಂಟನರಿ ಅವಾರ್ಡ್ ಪ್ರದಾನಿಸಲಾಗುವುದು. ಕೇರಳ ವಿಪಕ್ಷ ನಾಯಕ ವಿ.ಡಿ. ಸತೀಶನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಮಹಾ ಸಮ್ಮೇಳನದ ಸಂಘಟಕರಾದ ತೋಡಾರ್ ಉಸ್ತಾದ್ ಉಸ್ಮಾನುಲ್ ಫೈಝಿ, ಸೈಯ್ಯದ್ ಅಮೀರ್ ತಂಙಳ್, ಅಬ್ದುಲ್ ಖಾದರ್ ಧಾರಿಮಿ ಕುಕ್ಕಿಲ, ಇಸ್ಮಾಯಿಲ್ ಯಮಾನಿ, ಅಬೂಸಾಲಿ ಫೈಝಿ, ಮುಹಮ್ಮದ್ ಮಾಸ್ಟರ್, ಬಾತಿಷ್ ಹಾಜಿ ಪುತ್ತೂರು, ಇಕ್ಬಾಲ್ ಬಾಳಿಲ, ಇಮ್ತಿಯಾಝ್, ಯೂಸುಫ್ ಮುಂಡೋಳೆ ಮೊದಲಾದವರು ಉಪಸ್ಥಿತರಿದ್ದರು.







