ಫೆ. 6: "ನಾನ್‌ವೆಜ್" ತುಳು ಸಿನಿಮಾ ಬಿಡುಗಡೆ

ಮಂಗಳೂರು:ಜಯಕಿರಣ ಫಿಲಂಸ್ ಲಾಂಛನದಲ್ಲಿ , ಪ್ರಕಾಶ್ ಪಾಂಡೇಶ್ವರ್ ನಿರ್ಮಾಣದಲ್ಲಿ ಹಾಗೂ ಕೆ. ಸೂರಜ್ ಶೆಟ್ಟಿ ನಿರ್ದೇಶನದಲ್ಲಿ ಸಿದ್ಧಗೊಂಡಿರುವ ನಾನ್ ವೆಜ್ ತುಳು ಸಿನಿಮಾ ಫೆಬ್ರವರಿ 6 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ, ಈ ಸಿನಿಮಾವನ್ನು ಎಲ್ಲ ಮಲ್ಟಿಪ್ಲೆಕ್ಸ್‌ನಲ್ಲೂ ಕೇವಲ 99 ರೂ.ಗೆ ನೋಡಬಹುದಾಗಿದೆ. ಇದು ತುಳುಚಿತ್ರರಂಗದಲ್ಲಿ ಒಂದು ಹೊಸ ಸಂಚಲನ ಉಂಟು ಮಾಡಿದೆ. ಸಿಂಗಲ್ ಥಿಯೇಟರ್‌ಗಿಂತಲೂ ಕಡಿಮೆ ದರದಲ್ಲಿ ಈ ಸಿನಿಮಾವನ್ನು ತುಳು ಪ್ರೇಮಿಗಳು ಮಲ್ಟಿಫ್ಲೆಕ್ಸ್ ಗಳಲ್ಲಿ ನೋಡುವಂತಹ ಅವಕಾಶ ಇದಾಗಿದೆ“ ಎಂದು ಚಿತ್ರದ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
”ಕರಾವಳಿಯ ಪ್ರತಿಭೆಗಳಿಂದಲೇ ಸಿದ್ಧವಾಗಿರುವ ನಾನ್‌ವೆಜ್ ಒಂದು ಅತ್ಯುತ್ತಮ ಹಾಗೂ ಭಿನ್ನ ಕಥಾವಸ್ತುವನ್ನು ಹೊಂದಿದೆ. ಸು ಫ್ರಂ ಸೋ ಸಿನಿಮಾದ ಹೆಚ್ಚಿನ ಕಲಾವಿದರು ನಾನ್‌ವೆಜ್ ಸಿನಿಮಾದಲ್ಲೂ ಇದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಪ್ರಕಾಶ್ ತೂಮಿನಾಡು, ಬಾವ ಬಂದರು ಖ್ಯಾತಿಯ ಪುಷ್ಪರಾಜ್ ಬೊಳ್ಳೂರು, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ವಿಸ್ಮಯ ವಿನಾಯಕ್, ರೂಪಾ ವರ್ಕಾಡಿ ನಟಿಸಿದ್ದಾರೆ. ನಾಯಕಿಯಾಗಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿ ತಮ್ಮ ಅದ್ಭುತ ನಟನಾ ಕೌಶಲವನ್ನು ಪ್ರದರ್ಶಿಸಿದ್ದಾರೆ. ಜತೆಗೆ ಕುಸೇಲ್ದರಸೆ ನವೀನ್ ಡಿ. ಪಡೀಲ್ ಪ್ರಮುಖ ಪಾತ್ರದಲ್ಲಿದ್ದಾರೆ. ಈಗಾಗಲೇ ಕೆಲವು ತುಳು, ಕನ್ನಡ ಸಿನಿಮಾಗಳಲ್ಲಿ ನಟಿಸಿ ಭರವಸೆಯ ನಾಯಕ ನಟ ಎಂದೇ ಗುರುತಿಸಿಕೊಂಡಿರುವ ಅಥರ್ವ ಪ್ರಕಾಶ್ ಪ್ರಮುಖ ಪಾತ್ರದಲ್ಲಿದ್ದಾರೆ“ ಎಂದವರು ಹೇಳಿದರು.
ಚಿತ್ರದ ನಿರ್ದೇಶಕ ಸೂರಜ್ ಶೆಟ್ಟಿ ಮಾತನಾಡಿ ”ಚಿತ್ರದಲ್ಲಿ ಹಾಸ್ಯಕ್ಕೆ ಯಾವುದೇ ಕೊರತೆಯಿಲ್ಲ, ಮನೋರಂಜನೆಯೂ ಕಡಿಮೆ ಇಲ್ಲ, ಸಂದೇಶ - ಕಥೆಯೂ ಅದ್ಭುತವಾಗಿದೆ. ನಾನ್‌ವೆಜ್ ವಿಷಯವೇ ಎಲ್ಲರಿಗೂ ಖುಷಿ ಕೊಡಲಿದೆ. ಪ್ರೀತಿಯ ಹಿಂದೆ ಹೋಗುತ್ತಿರುವ ಮುಗ್ಧ ಯುವಕನೊಬ್ಬನ ಸುತ್ತ ಹೆಣೆದಿರುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಆದ ಕಾರಣ ಇದು ಯುವ ಸಮುದಾಯವನ್ನು ಸೆಳೆಯುವ ಸಾಧ್ಯತೆ ನಿಚ್ಚಳವಾಗಿದೆ. ಮಕ್ಕಳೊಂದಿಗೆ ಹೆತ್ತವರು ಜತೆಯಾಗಿ ಕುಳಿತು ನೋಡಬೇಕಾದ ಸಿನಿಮಾವಾಗಿದ್ದು, ಇಡೀ ಸಿನಿಮಾದ ಕಥೆ ಹಾಗೂ ಸಂದೇಶವನ್ನು ಹಾಸ್ಯದಲ್ಲೇ ತೆಗೆದುಕೊಂಡು ಹೋಗಿರುವುದು ಒಂದು ದೊಡ್ಡ ಪ್ಲಸ್ ಪಾಯಿಂಟ್“ ಎಂದು ಹೇಳಿದರು.
ನಾಯಕನಟ ಅಥರ್ವ ಪ್ರಕಾಶ್ ಮಾತಾಡಿ, ”ನಾನ್‌ವೆಜ್ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಇದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.ಪ್ರಮುಖ ಕಲಾವಿದರೂ ಈ ಸಿನಿಮಾದಲ್ಲಿದ್ದಾರೆ. ಟೀಸರ್ ಸೂಪರ್ ಆಗಿದೆ. ಸಿನಿಮಾವಂತೂ ಭರ್ಜರಿ ಮನೋರಂಜನೆ ನೀಡಲಿದೆ“ ಎಂದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಸೂರಜ್ ಶೆಟ್ಟಿ, ನಟ ವಿಸ್ಮಯ ವಿನಾಯಕ,ನಟ ಅಥರ್ವ ಪ್ರಕಾಶ್ ಮತ್ತು ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.
"ನಾನ್‌ವೆಜ್" ಶಬ್ದದಲ್ಲೇ ಗೂಢಾರ್ಥವಿದೆ. ನಾನು ವೆಜ್, ನಾನ್‌ವೆಜ್ - ಹೀಗೆ ಬೇರೆ ಬೇರೆ ಅರ್ಥ ಕೊಡುವ ಈ ಶಬ್ದದ ಹೆಸರನ್ನು ಇಟ್ಟುಕೊಂಡಿರುವ ಸಿನಿಮಾದ ಕಥೆ ಕೂಡ ಕುತೂಹಲಕಾರಿಯಾಗಿಯೇ ಸಾಗುತ್ತಿದೆ. ಕೇವಲ 99 ರೂಪಾಯಿಗೆ ಮಲ್ಟಿಪ್ಲೆಕ್ಸ್‌ನಲ್ಲಿ ಈ ಸಿನಿಮಾ ನೋಡಲು ಚಿತ್ರತಂಡ ಅವಕಾಶ ಮಾಡಿಕೊಟ್ಟಿದೆ. ತುಳು ಸಿನಿಮಾರಂಗದಲ್ಲಿ ಹೊಸತನ ಇಲ್ಲ” ಅನ್ನೋ ಮಾತು ಮತ್ತೆ ಮತ್ತೆ ಕೇಳಿಸೋ ಸಮಯದಲ್ಲೇ, ಆ ಮಾತಿಗೆ ನೇರ ಉತ್ತರ ಕೊಡುವಂತೆ ‘ನಾನ್ ವೆಜ್’ ಸಿನಿಮಾ ಫೆಬ್ರವರಿ 6ರಿಂದ ಚಿತ್ರಮಂದಿರಗಳಿಗೆ ಎಂಟ್ರಿ ಕೊಡ್ತಾ ಇದೆ.
ಇತ್ತೀಚಿನ ವರ್ಷಗಳಲ್ಲಿ ತುಳು ಸಿನಿಮಾಗಳು ಪ್ರಯೋಗಾತ್ಮಕವಾಗಿ ಬಂದರೂ ಪ್ರೇಕ್ಷಕರವರೆಗೆ ತಲುಪುವುದು ಕಷ್ಟವಾಗಿತ್ತು. ಅಂಥ ಸಂದರ್ಭದಲ್ಲಿ ಕುಟುಂಬ ಸಮೇತ ಕೂತು ನೋಡಬಹುದಾದ, ನೈಜ ಜೀವನದ ಸನ್ನಿವೇಶಗಳು, ತುಳು ಮಣ್ಣಿನ ವಾಸನೆ, ಮತ್ತು ಭರಪೂರ ಮನರಂಜನೆ –ಇದೆಲ್ಲದರ ಮಿಶ್ರಣವೇ ‘ನಾನ್ ವೆಜ್’. ಮಂಗಳೂರಿನ ಪ್ರತಿಭೆ ಅಥರ್ವ ಪ್ರಕಾಶ್ ಅವರ ಮನಸ್ಪರ್ಶಿ ಅಭಿನಯ, ನಾಯಕಿ ಸಂಜನಾ ಬುರ್ಲಿ ಅವರ ಆಕರ್ಷಕತೆ, ಹಾಸ್ಯದಲ್ಲಿ ಕಚಗುಳಿ ಇಡುವ ದೀಪಕ್ ರೈ ಪಾಣಾಜೆ, ಪ್ರಕಾಶ್ ತೂಮಿನಾಡ್, ಪುಷ್ಪರಾಜ್ ಬೊಳ್ಳಾರ್, ವಿಸ್ಮಯ ವಿನಾಯಕ್ ಹಾಸ್ಯ, ನವೀನ್ ಡಿ ಪಡೀಲ್, ರೂಪಾ ವರ್ಕಾಡಿ ಇವರೆಲ್ಲರೂ ಈ ಸಿನಿಮಾದಲ್ಲಿರುವುದು ನಿರೀಕ್ಷೆ ದುಪ್ಪಟ್ಟಾಗಲು ಮತ್ತೊಂದು ಪ್ರಮುಖ ಕಾರಣ.







