ಕಾರ್ಕಳದಲ್ಲಿ ಪರಶುರಾಮನ ಫೈಬರ್ ಪ್ರತಿಮೆ ನಿರ್ಮಿಸಿ ಕಂಚಿನದ್ದೆಂದು ಮೋಸಗೊಳಿಸಲಾಗಿದೆ: ಕಾಂಗ್ರೆಸ್ ಪ್ರತಿಭಟನೆ

ಉಳ್ಳಾಲ: ದೈವ-ದೇವರ ಹೆಸರಲ್ಲಿ ಜನರನ್ನು ಮೋಸಗೊಳಿಸುವುದು ನಿಮ್ಮ ಹಿಂದುತ್ವ ಆದರೆ, ಇಂಥ ನಾಟಕವಾಡದ ನಮ್ಮದು ಅಸಲೀ ಹಿಂದುತ್ವ ಆಗಿದೆ. ಚುನಾವಣಾ ಸಂದರ್ಭ ಸುನಿಲ್ ಕುಮಾರ್ ತಾನು ಹಿಂದೂ ಹುಲಿ ಎಂದು ತೋರಿಸಲು ಪರಶುರಾಮನ ನಕಲಿ ಮೂರ್ತಿ ತಂದು ಇಟ್ಟಿದ್ದಾರೆ. ಮೂರ್ತಿ ಇಡುವಾಗ ಸುನಿಲ್ ಕುಮಾರ್ ಭಜನೆ ಮಾಡಿದ್ದು, ಶಂಖ ಊದಿದ್ದು ಸತ್ಯ ಎಂದಾದರೆ, ಪರಶುರಾಮನ ಮೂರ್ತಿ ಸತ್ಯ ಯಾಕಲ್ಲ ಎಂದು ಕಾಂಗ್ರೆಸ್ ಮುಖಂಡ ರಾದ ಎಂ.ಜಿ.ಹೆಗ್ಡೆ ಪ್ರಶ್ನಿಸಿದರು.
ಅವರು ಕಾರ್ಕಳದಲ್ಲಿ ಪರಶುರಾಮನ ಫೈಬರ್ ಪ್ರತಿಮೆ ನಿರ್ಮಿಸಿ ಕಂಚಿನದ್ದೆಂದು ಹೇಳಿ ಹಿಂದೂಗಳನ್ನು ಮೋಸಗೊಳಿಸಲಾಗಿದೆ ಎಂದು ಆರೋಪಿಸಿ ಗುರುವಾರ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕಲ್ಲಡ್ಕ ಪ್ರಭಾಕರ ಭಟ್, ಸೂಲಿಬೆಲೆ, ಶೋಭಕ್ಕ, ಸಿ.ಟಿ.ರವಿಯವರು ಈಗೆಲ್ಲಿದ್ದಾರೆ ? ಇವರೇಕೆ ಕಾರ್ಕಳಕ್ಕೆ ಹೋಗುತ್ತಿಲ್ಲ? ಇಂಥ ಮೋಸ ಕಾಂಗ್ರೆಸ್ ಆಡಳಿತದಲ್ಲಾದರೆ ಕರಾವಳಿ ಹೊತ್ತಿ ಉರಿಯುತ್ತಿತ್ತು. ಪರಶುರಾಮನ ಶಾಪ ಕರಾವಳಿ ಬಿಜೆಪಿ ಮುಕ್ತ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಶುರಾಮನ ಪ್ರತಿಮೆ ನಿರ್ಮಾಣಗೊಂಡ ಮೂರ್ತಿಯೂ ನಕಲಿ, ಜಮೀನೂ ಅಕ್ರಮ. ಗೋಮಾಳ ಜಾಗದಲ್ಲಿ ಪ್ರತಿಮೆ ನಿರ್ಮಿಸಿದ್ದು ಸುನಿಲ್ ಕುಮಾರ್ ಅವರ ದೊಡ್ಡ ಹುನ್ನಾರ. ಜಿಲ್ಲಾಡಳಿತ, ಕಂದಾಯ ಇಲಾಖೆ ತಿರಸ್ಕರಿಸಿದ ಜಾಗದಲ್ಲಿ ನಿರ್ಮಿತಿ ಕೇಂದ್ರ ಮೂರ್ತಿ ನಿರ್ಮಿಸಿದ್ದು ಬಿಜೆಪಿಯ ಯಾವ ಸೀಮೆಯ ಆಡಳಿತ ಎಂದು ಪ್ರಶ್ನಿಸಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುನಿಲ್ ಕುಮಾರ್ ಸಚಿವರಾಗಿದ್ದಾಗ ನಿರ್ಮಿತಿ ಕೇಂದ್ರದ ಮೂಲಕ ಫೈಬರ್ ಪ್ರತಿಮೆ ನಿರ್ಮಿಸಿ ಕಂಚಿನದ್ದೆಂದು ಹೇಳಿ ಜನರನ್ನು ಮೂರ್ಖರನ್ನಾಗಿಸಿದೆ, ಈ ಬಗ್ಗೆ ಜನತೆಗೆ ತಿಳಿಸದಿದ್ದಲ್ಲಿ ಮುಂದಕ್ಕೆ ಇನ್ನಷ್ಟು ಹಗರಣ ನಡೆಯುವ ಆತಂಕ ಇದೆ ಎಂದರು.
ಈ ಸಂದರ್ಭ ಉಡುಪಿ ಯುವಕಾಂಗ್ರೆಸ್ ಅಧ್ಯಕ್ಷರಾದ ದೀಪಕ್ ಕೋಟ್ಯಾನ್, ಕಾಂಗ್ರೆಸ್ ಜಿಲ್ಲಾ ಸದಸ್ಯರಾದ ಸುರೇಶ್ ಭಟ್ನಗರ, ಮಂಗಳೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹಮ್ಮದ್ ಮೋನು, ಮಾಜಿ ಸದಸ್ಯರಾದ ಮಹಮ್ಮದ್ ಮುಸ್ತಫಾ ಮಲಾರ್, ಸುರೇಖಾ ಚಂದ್ರಹಾಸ್, ಉಳ್ಳಾಲ ನಗರ ಕಾಂಗ್ರೆಸ್ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಪ್ರಮುಖರಾದ ದಿನೇಶ್ ರೈ, ಚಂದ್ರಿಕಾ ರೈ, ಮನ್ಸೂರ್ ಮಂಚಿಲ, ಪುರುಷೋತ್ತಮ ಶೆಟ್ಟಿ ಪಿಲಾರ್, ಯೂಸುಫ್ ಉಳ್ಳಾಲ್, ಉಸ್ಮಾನ್ ಕಲ್ಲಾಪು, ವೀಣಾ ಡಿಸೋಜ, ದೀಪಕ್ ಕೋಟ್ಯಾನ್, ದಿನೇಶ್ ರೈ ಮತ್ತಿತರರು ಉಪಸ್ಥಿತರಿದ್ದರು.







