ವೆನ್ಲಾಕ್ ಆವರಣಕ್ಕೆ ತಂಬಾಕು ಉತ್ಪನ್ನ, ಮದ್ಯ ಕೊಂಡೊಯ್ದರೆ ದಂಡ!

ಮಂಗಳೂರು, ಡಿ.7: ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆ ವತಿಯಿಂದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ವೆನ್ಲಾಕ್ ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರನ್ನು ಭೇಟಿ ಯಾಗಲು ಆಗಮಿಸುವವರು ತಂಬಾಕು ಅಥವಾ ಮದ್ಯವನ್ನು ಆಸ್ಪತ್ರೆ ಆವರಣಕ್ಕೆ ತರುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ತಂಬಾಕು ಉತ್ಪನ್ನಗಳನ್ನು ಅಥವಾ ಮದ್ಯ ಕೊಂಡೊಯ್ದರೆ ದಂಡ ಬೀಳುವುದು ಖಚಿತ.
ನಿಷೇಧ ಹೇರಿದ ಬಳಿಕ ತಂಬಾಕು, ಮದ್ಯ ತರಲು ಯತ್ನಿಸುವ ಪ್ರಕರಣಗಳು ಕಡಿಮೆಯಾಗಿದೆ. ಹಾಗೆಯೇ ವೆನ್ಲಾಕ್ ಆಸ್ಪತ್ರೆ ಆವರಣ ಸ್ವಚ್ಛವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ತಿಳಿಸಿದ್ದಾರೆ.
2025ರ ಮಾರ್ಚ್ 24ರಿಂದಲೇ ಈ ಕ್ರಮ ಜಾರಿಯಲಿದ್ದು, ಆಸ್ಪತ್ರೆಗೆ ಬರುವವರನ್ನು ಈ ನಿಟ್ಟಿನಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಜಗಿಯುವ ತಂಬಾಕು, ಗುಟ್ಕಾ, ಮದ್ಯ ಪತ್ತೆಯಾದರೆ 100 ರಿಂದ 500 ರೂ.ವರೆಗೆ ದಂಡ ವಿಧಿಸಲಾಗುತ್ತಿದೆ.
ತಂಬಾಕು ಸೇವನೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಆಸ್ಪತ್ರೆಯ ವಾತಾವರಣವನ್ನು ಸ್ವಚ್ಛವಾಗಿರಿಸುವ ಉದ್ದೇಶಕ್ಕಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಜಿಲ್ಲಾ ವೈದ್ಯಾಧಿಕಾರಿಯಾಗಿ ಡಾ.ಶಿವಪ್ರಕಾಶ್ ಅಧಿಕಾರ ವಹಿಸಿಕೊಂಡ ನಂತರ ತಂಬಾಕು ಉತ್ಪನ್ನಗಳು, ಮದ್ಯ ಒಯ್ಯುವವರನ್ನು ಆಸ್ಪತ್ರೆಗೆ ಬಿಡದಂತೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದ್ದರು.
ಇಲ್ಲಿಯವರೆಗೆ ಆಸ್ಪತ್ರೆಗೆ ತಂಬಾಕು ಉತ್ಪನ್ನ ಅಥವಾ ಮದ್ಯ ತರಲು ಯತ್ನಿಸಿದ 1,400ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದ್ದು, ಸುಮಾರು 1.83 ಲಕ್ಷ ರೂ. ದಂಡ ಸಂಗ್ರಹಿಸ ಲಾಗಿದೆ ಎಂದು ಆಸ್ಪತ್ರೆಯ ಮೂಲ ತಿಳಿಸಿದೆ.
ವಶಪಡಿಸಿಕೊಂಡ ತಂಬಾಕು ಉತ್ಪನ್ನ ಮತ್ತು ಮದ್ಯವನ್ನು ಮಾಲಿನ್ಯ ನಿಯಂತ್ರಣ ಕಾಯ್ದೆಯಂತೆ ವಿಲೇವಾರಿ ಮಾಡಲಾಗುತ್ತಿದೆ.
ದ.ಕ. ಜಿಲ್ಲೆಯಲ್ಲಿ ಇಂತಹ ಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಏಕೈಕ ಆಸ್ಪತ್ರೆ ವೆನ್ಲಾಕ್ ಆಗಿದೆ. ಎಲ್ಲ ತಾಲೂಕು ಆಸ್ಪತ್ರೆಗಳಲ್ಲೂ ಇದೇ ಕ್ರಮ ಅನುಸರಿಸುವಂತೆ ದ.ಕ. ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಸಂಗ್ರಹವಾದ ದಂಡದ ಮೊತ್ತವನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿ ಜಂಟಿ ಖಾತೆಗೆ ಜಮಾ ಮಾಡಲಾಗುತ್ತದೆ.







