ಹತ್ತು ಮಂದಿಗಿಂತ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳಲ್ಲಿ ನ. 30ರೊಳಗೆ ಐಸಿಸಿ ರಚನೆ ಕಡ್ಡಾಯ : ವಿಲ್ಮಾ ಎಲಿಝಬೆತ್ ತಾವ್ರೋ

ಮಂಗಳೂರು, ನ.18: ಮಹಿಳೆಯರಿಗೆ ಕೆಲಸದ ವೇಳೆ ಲೈಂಗಿಕ ದೌರ್ಜನ್ಯ ತಡೆಯುವ ಪೋಷ್‌ಕಾಯ್ದೆ 2013 ಜಾರಿಯಾಗಿರುವ ಹಿನ್ನೆಲೆಯಲ್ಲಿ 10ಕ್ಕಿಂತ ಅಧಿಕ ಉದ್ಯೋಗಿಗಳಿರುವ ಪ್ರತೀ ಸಂಸ್ಥೆಗಳಲ್ಲಿ ಅಂತರಿಕ ದೂರು ಸಮಿತಿ(ಐಸಿಸಿ) ರಚಿಸುವುದು ಕಡ್ಡಾಯವಾಗಿದೆ ಎಂದು ಮಂಗಳೂರು ಉಪ ವಿಭಾಗ 2ರ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಝಬೆತ್ ತಾವ್ರೋ ಹೇಳಿದ್ದಾರೆ.
ನಗರದ ಬಂದರಿನಲ್ಲಿ ಕೆನರಾ ಚೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರಿ (ಕೆಸಿಸಿಐ) ಆಶ್ರಯದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ (ಪೋಷ್) ಕಾಯ್ದೆ 2013ರ ಅನುಸಾರವಾಗಿ ಆಂತರಿಕ ದೂರುಗಳ ಸಮಿತಿ (ಐಸಿಸಿ) ರಚನೆಯ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ಹತ್ತು ಮಂದಿಗಿಂತ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳಲ್ಲಿ ನವೆಂಬರ್ 30ರೊಳಗೆ ಆಂತರಿಕ ದೂರು ಸಮಿತಿ ರಚಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು.
ಒಂದೇ ಸಂಸ್ಥೆಯು ವಿವಿಧ ಶಾಖೆಗಳನ್ನು ಹೊಂದಿದ್ದರೆ ಪ್ರತೀ ಶಾಖೆಯಲ್ಲೂ ಸಮಿತಿ ರಚಿಸಿ ‘ಶೀ ಬಾಕ್ಸ್ ‘(https://shebox.wcd.gov.in). ಪೋರ್ಟಲ್ ನಲ್ಲಿ ನೋಂದಾಯಿಸುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ಹತ್ತಕ್ಕಿಂತ ಕಡಿಮೆ ಸಿಬ್ಬಂದಿ ಸಂಸ್ಥೆಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಅಥವಾ ತಹಶೀಲ್ದಾರ್ ಅವರ ನೇತೃತ್ವದ ಸ್ಥಳೀಯ ಕಮಿಟಿಗಳ ವ್ಯಾಪ್ತಿಗೆ ಒಳಪಡುತ್ತಾರೆ. ಅವರ ಮೂಲಕ ಮಹಿಳಾ ದೌರ್ಜನ್ಯದ ದೂರುಗಳನ್ನು ಸಲ್ಲಿಸಲು ಅವಕಾಶವಿದೆ ಎಂದು ವಿವರಿಸಿದರು.
ಪ್ರತೀ ಮೂರು ತಿಂಗಳಿಗೊಮ್ಮೆ ಸಮಿತಿ :
ಮಂಗಳೂರು ಉಪ ವಿಭಾಗ 1ರ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್. ಅವರು ಮಾತನಾಡಿ, ‘ ಮಹಿಳೆಯರ ಮೇಲೆ ದೌರ್ಜನ್ಯದ ವಿರುದ್ಧ ಇರುವ ಸಮಿತಿಗೆ ಸಂಸ್ಥೆಯ ಹಿರಿಯ ಮಹಿಳಾ ಉದ್ಯೋಗಿಯೇ ಸಮಿತಿಯ ಅಧ್ಯಕ್ಷರಾಗಿರಬೇಕು. ಸಮಿತಿಯಲ್ಲಿ ಕನಿಷ್ಠನಾಲ್ಕು ಇರಬೇಕು. ಓರ್ವ ಸದಸ್ಯ ಹೊರಗಿನವರಾಗಿರಬೇಕು. ಒಮ್ಮೆ ರಚಿಸಿದ ಸಮಿತಿ 3 ವರ್ಷದ ಅವಧಿ ಹೊಂದಿದೆ. ಪ್ರತೀ ಮೂರು ತಿಂಗಳಿಗೊಮ್ಮೆ ಸಮಿತಿ ಸಭೆ ನಡೆಸಬೇಕು. ದೂರುಗಳಿದ್ದರೆ ಅವುಗಳನ್ನು ‘ಶೀ’ ಬಾಕ್ಸ್ ಮೂಲಕ ಸಲ್ಲಿಸಬೇಕು. ಏನಾದರೂ ದೌರ್ಜನ್ಯಗಳು ನಡೆದಲ್ಲಿ ಮೂರು ತಿಂಗಳ ಒಳಗಾಗಿ ಮಹಿಳೆ ಸಮಿತಿಗೆ ದೂರು ಸಲ್ಲಿಸಬೇಕು. ಸಮಿತಿಯು ಪರಾಮರ್ಶೆ ನಡೆಸಿ 7 ದಿನಗಳೊಳಗೆ ಸಂಬಂಧಿಸಿದ ಠಾಣೆಗೆ ದೂರು ನೀಡಬೇಕು. ಸಮಿತಿಯವರು ಮಾಹಿತಿಯನ್ನು ಹೊರಗಡೆ ನೀಡುವಂತಿಲ್ಲ. ಪ್ರಕರಣಗಳನ್ನು ಮುಚ್ಚಿ ಹಾಕಲು ಯತ್ನಿಸಿದ್ದಲ್ಲಿ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಕಾನೂನು ಇದೆ ಎಂದು ಸುಳ್ಳು ಪ್ರಕರಣ ದಾಖಲಿಸಿದ್ದಲ್ಲಿ ಮಹಿಳೆಯ ವಿರುದ್ಧವೂ ಕೂಡ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದರು.
ದ.ಕ. ಜಿಲ್ಲೆಯಲ್ಲಿ ಶೇ.10ರಷ್ಟು ಸಮಿತಿ :
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಶೇ.10ರಷ್ಟು ಮಾತ್ರವೇ ಸಮಿತಿಗಳು ರಚನೆಯಾಗಿವೆ. ಶೇ. 90ರಷ್ಟು ಕೆಲಸ ಬಾಕಿ ಇದೆ. ಸಮಿತಿ ರಚಿಸಲು ಹಿಂದೇಟು ಹಾಕಿದ್ದಲ್ಲಿ ಇಲಾಖೆ ಪರೀಕ್ಷಿಸುವ ವೇಳೆ ಸಂಸ್ಥೆಗಳಿಗೆ ದಂಡ ವಿಧಿಸಲಿದೆ. ಅದಕ್ಕೆ ಅವಕಾಶ ನೀಡದೆ ಎಲ್ಲಾ ಸಂಸ್ಥೆಯವರು ಶೀಘ್ರದಲ್ಲೇ ಸಮಿತಿಗಳನ್ನು ಸ್ಥಾಪಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಲಿಂಗ ತಜ್ಞೆ ವಿಶಾಲಾಕ್ಷಿ ಮತ್ತು ಕೆಸಿಸಿಐ ಲೇಬರ್ ಉಪ ಸಮಿತಿಯ ಚೇರ್ ಮೆನ್ ಶಾಮ್ಲಾಲ್ ಎರ್ಮಾಳ್ ಮಾಹಿತಿ ನೀಡಿದರು.
ಕೆಸಿಸಿಐ ಅಧ್ಯಕ್ಷ ಬಿ.ಅಹ್ಮದ್ ಮುದಸ್ಸರ್ ಸ್ವಾಗತಿಸಿ, ಉಪಾಧ್ಯಕ್ಷ ದಿವಾಕರ್ ಪೈ ಕೊಚೀಕರ್ ವಂದಿಸಿದರು. ಮುಖ್ಯ ಕಾರ್ಯ ನಿರ್ಹಣಾಧಿಕಾರಿ ಮೈಥ್ರೇಯ ಕಾರ್ಯಕ್ರಮ ನಿರೂಪಿಸಿದರು.







